ಮೈಸೂರು: ಅಪ್ಪು ಅವರ ನಗುವಿನಲ್ಲಿ ಸೌಂದರ್ಯವಿದೆ. ದಾನ–ಧರ್ಮ, ಸೇವೆಗಳು ಅವರ ನಗೆಯಲ್ಲಿ ಪ್ರತಿಫಲಿಸುತ್ತದೆ. ಅಂತಹ ನಗು ಬೇರೆಲ್ಲೂ ಕಾಣದು. ಶಾಶ್ವತವಾದ ನಾಯಕರಾಗಿ ಜನರ ಎದೆಯಲ್ಲಿ ಉಳಿದಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯ ಹಂಗಾಮಿ ಕುಲಪತಿ ಪ್ರೊ.ಮುಜಾಫರ್ ಅಸ್ಸಾದಿ ಸ್ಮರಿಸಿದರು.
ಮಾನಸಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ‘ಅಸ್ತಿತ್ವ ಬಳಗ’ದ ಸಹಯೋಗದಲ್ಲಿ ‘ಪುನೀತ್ ರಾಜ್‌ಕುಮಾರ್’ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ‘ಅಪ್ಪು ಆಲದ ಮರ’ ದೃಶ್ಯಕಾವ್ಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಸಂಸ್ಕೃತಿಯ ಹಿರಿಮೆಯು ರಾಜಕುಮಾರ್ ಮೂಲಕ ಅಭಿವ್ಯಕ್ತಗೊಂಡಿದೆ. ಅವರು ಕನ್ನಡ ಅಸ್ಮಿತೆಯ ಪ್ರತೀಕ. ಅವರ ಮುಂದುವರಿಕೆ ಪುನೀತ್ ರಾಜ್‌ಕುಮಾರ್ ಅವರಾಗಿದ್ದರು ಎಂದು ಹೇಳಿದರು.
ರಾಜಕುಮಾರ್ ಹಾಗೂ ಪುನೀತ್ ಇಬ್ಬರೂ ಕನ್ನಡಿಗರ ಆಳಕ್ಕಿಳಿದ್ದಾರೆ. ಸಿನಿಮಾಗಳ ಮೂಲಕ ಸಾಮಾಜಿಕ ಬದಲಾವಣೆಯನ್ನು ಮಾಡಿದವರು. ಅಪ್ಪು ಸಾವು ಸಾಮಾನ್ಯದ್ದಲ್ಲ. ಅದು ಸುಂದರ ಪಯಣದ ಸಾವು. ಸೌಂದರ್ಯದ ಸಾವು. ಕನ್ನಡಿಗರ ಪ್ರತಿನಿಧಿತ್ವ ಹಾಗೂ ಸಂಕೇತವೊಂದರ ನಷ್ಟ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಿಂದ ಬಂದು ಸಾಧಿಸಿ ತೋರಿದ ಇಬ್ಬರು ಅದ್ಭುತ ವ್ಯಕ್ತಿತ್ವರಾಜ್ ಕುಮಾರ್ ಹಾಗೂ ಎಚ್.ಡಿ.ದೇವೇಗೌಡ. ಇಬ್ಬರಲ್ಲೂ ದೇಸಿ ಪರಂಪರೆಯಿತ್ತು. ಹೀಗಾಗಿಯೇ ರಾಜ್‌ಕುಮಾರ್ ಸಿನಿಮಾಗಳಲ್ಲಿ ಗಟ್ಟಿತನವಿದೆ. ಅವು ಸದಾ ಚಿಂತನೆಗೆ ಒಡ್ಡುತ್ತವೆ. ಗಂಧದಗುಡಿಯ ಕುಮಾರ್, ಮಂತ್ರಾಲಯ ಮಹಾತ್ಮೆಯ ರಾಘವೇಂದ್ರ ಸ್ವಾಮಿ ಪಾತ್ರಗಳು ಈಗಲೂ ಕಾಡುತ್ತವೆ. ರಾಜ್‌ರ ಸಿನಿಮಾಗಳು ಸಾರ್ವಕಾಲಿಕ ಎಂದರು.
ಡಾ.ಎನ್.ಕೆ.ಲೋಲಾಕ್ಷಿ– ಸಾಹಿತ್ಯ, ನಾಗೇಶ್ ಕಂದೇಗಾಲ– ಸಂಗೀತ, ಗಾಯಕ ಚಿಂತನ್ ವಿಕಾಸ್ ಹಾಡಿರುವ ‘ಆಲದಮರವೇ ದೊಡ್ಡಾಲದ ಮರವೇ..’ ದೃಶ್ಯಕಾವ್ಯವನ್ನು ಪುನೀತ್ ರಾಜ್‌ಕುಮಾರ್ ಸಹೋದರಿ ಲಕ್ಷ್ಮಿ ಗೋವಿಂದರಾಜು ಬಿಡುಗಡೆ ಮಾಡಿದರು. ಹಾಡು ನೋಡುತ್ತಲೇ ಕಣ್ಣೀರಾದರು.
ಸಂಸ್ಥೆಯ ನಿರ್ದೇಶಕಿ ಪ್ರೊ.ವಿಜಯಕುಮಾರಿ ಎಸ್. ಕರಿಕಲ್, ಗೀತೆಯ ಸಂಕಲನಕಾರ ರೇವತ್, ವಕೀಲ ಅಪ್ಪುಗಿರಿ ಇದ್ದರು.