ಮನೆ ಕ್ರೀಡೆ ವಿಶ್ವಕಪ್‌ ಆರ್ಚರಿ 3: ವೈಯಕ್ತಿಕ ಫೈನಲ್‌ ನಲ್ಲಿ ಚಿನ್ನ ಗೆದ್ದ ಭಾರತದ ಅಭಿಷೇಕ್‌ ವರ್ಮ

ವಿಶ್ವಕಪ್‌ ಆರ್ಚರಿ 3: ವೈಯಕ್ತಿಕ ಫೈನಲ್‌ ನಲ್ಲಿ ಚಿನ್ನ ಗೆದ್ದ ಭಾರತದ ಅಭಿಷೇಕ್‌ ವರ್ಮ

0

ಮೆಡೆಲಿನ್‌ (ಕೊಲಂಬಿಯ): ವಿಶ್ವಕಪ್‌ ಆರ್ಚರಿ ಮೂರನೇ ಹಂತದ ಪುರುಷರ ಕಾಂಪೌಂಡ್‌ ವೈಯಕ್ತಿಕ ಫೈನಲ್‌ ನಲ್ಲಿ ಭಾರತದ ಅಭಿಷೇಕ್‌ ವರ್ಮ ಚಿನ್ನದ ಪದಕ ಗೆದ್ದಿದ್ದಾರೆ.

Join Our Whatsapp Group

2014ರ ಇಂಚಿಯಾನ್‌ ಏಷ್ಯನ್‌ ಗೇಮ್ಸ್‌ ನ ಕಾಂಪೌಂಡ್‌ ತಂಡ ಸ್ಪರ್ಧೆಯಲ್ಲಿ ಚಿನ್ನ ಮತ್ತು ವೈಯಕ್ತಿಕವಾಗಿ ಬೆಳ್ಳಿ ಜಯಿಸಿದ್ದ 33ರ ಹರೆಯದ ಅಭಿಷೇಕ್‌ ಫೈನಲ್‌ ಹೋರಾಟದಲ್ಲಿ ಅಮೆರಿಕದ ಜೇಮ್ಸ್‌ ಲುಟ್ಜ್ ಅವರನ್ನು 148-146 ಅಂತರದಿಂದ ಸೋಲಿಸಿದರು.

ವಿಶ್ವಕಪ್‌ನಲ್ಲಿ ಹಲವು ಚಿನ್ನದ ಪದಕ ಗೆದ್ದಿರುವ ಅಭಿಷೇಕ್‌ ಈ ವಿಶ್ವಕಪ್‌ ನ ಮೊದಲೆರಡು ಹಂತಗಳಲ್ಲಿ ಆಡಿರಲಿಲ್ಲ. ಮೂರನೇ ಹಂತದ ಈ ಹಿಂದಿನ ಸುತ್ತುಗಳಲ್ಲಿ ಅವರು ವಿಶ್ವದ ನಂಬರ್‌ ವನ್‌ ಮತ್ತು ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್‌ ನ ಮೈಕ್‌ ಸ್ಕೋಸ್ಸರ್‌ ಅವರನ್ನು ಶೂಟ್‌ ಆಫ್ ನಲ್ಲಿ ಸೋಲಿಸಿ ಸೆಮಿಫೈನಲ್‌ ಹಂತಕ್ಕೇರಿದ್ದರು. ಎಂಟನೇ ಶ್ರೇಯಾಂಕದ ವರ್ಮ ಆಬಳಿಕ ಬ್ರಝಿಲ್‌ನ ಲುಕಾಸ್‌ ಅಬ್ರೆಯು ಅವರನ್ನು ಸೋಲಸಿ ಫೈನಲಿಗೇರಿದ್ದರು.

ಇದು ವಿಶ್ವಕಪ್‌ ನಲ್ಲಿ ಅಭಿಷೇಕ್‌ ಪಡೆದ ಮೂರನೇ ವೈಯಕ್ತಿಕ ಚಿನ್ನವಾಗಿದೆ. 2021ರ ಪ್ಯಾರಿಸ್‌ ಬಳಿಕ ಗೆದ್ದ ಮೊದಲ ಪದಕವೂ ಆಗಿದೆ. 2015ರಲ್ಲಿ ಪೋಲಂಡಿನ ವ್ರೊಕ್ಲಾದಲ್ಲಿ ನಡೆದ ವಿಶ್ವಕಪ್‌ ನಲ್ಲಿ ಅವರು ಮೊದಲ ಬಾರಿ ಚಿನ್ನ ಜಯಿಸಿದ್ದರು. ವಿಶ್ವಕಪ್‌ ನಲ್ಲಿ ಅವರು ಈ ಹಿಂದೆ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಜಯಿಸಿದ್ದರು.

ಭಾರತೀಯ ತಂಡ ಈ ವಿಶ್ವಕಪ್‌ನಲ್ಲಿ ಇದೀಗ ಒಂದು ಚಿನ್ನ ಸಹಿತ ಮೂರು ಕಂಚಿನ ಪದಕ ಗೆದ್ದುಕೊಂಡಿದೆ. ರಿಕರ್ವ್‌ ಮಿಕ್ಸೆಡ್‌ ತಂಡ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಅವಕಾಶ ಪಡೆದಿದೆ. ಈ ತಂಡ ಫ್ರಾನ್ಸ್‌ ಮತ್ತು ನೆದರ್ಲೆಂಡ್ಸ್‌ ತಂಡವನ್ನು ಸೋಲಿಸಿ ಸೆಮಿಫೈನಲಿಗೇರಿತ್ತು. ಆದರೆ ಅಲ್ಲಿ ಕೊರಿಯಕ್ಕೆ ಶರಣಾಗಿತ್ತು. ಇದೀಗ ಕಂಚಿನ ಪದಕಕ್ಕಾಗಿ ಚೈನೀಸ್‌ ತೈಪೆ ಜತೆ ಹೋರಾಡಲಿದೆ.