ಮನೆ ಅಪರಾಧ ಎಟಿಎಂಗೆ ಬರುವವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿಯ ಬಂಧನ

ಎಟಿಎಂಗೆ ಬರುವವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿಯ ಬಂಧನ

0

ಮೈಸೂರು(Mysuru): ಹಣ ಡ್ರಾ ಮಾಡಲು ಎಟಿಎಂ ಕೇಂದ್ರಕ್ಕೆ ಬರುತ್ತಿದ್ದವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಕೆ.ಆರ್‌.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಂಚಿಸಿದ ನಗದಿನಲ್ಲಿ ಆರೋಪಿಯು ಖರೀದಿಸಿದ್ದ 3.8 ಗ್ರಾಂ ಚಿನ್ನ, ಬೈಕ್‌ ಹಾಗೂ ₹ 1 ಲಕ್ಷ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಈ ಕುರಿತು ಮಾಹಿತಿ ನೀಡಿದ್ದು, ಮೇ 30ರಂದು ಕೆ.ಆರ್.ನಗರದ ಎಟಿಎಂ ಕೇಂದ್ರದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಜಿಲ್ಲೆಯ 6 ಕಡೆ ವಂಚನೆ ನಡೆಸಿರುವುದಾಗಿ ಹೇಳಿದ್ದಾನೆ. 25– 30 ವಯಸ್ಸಿನ ಆರೋಪಿಯು ಜಿಲ್ಲೆಯ ನಿವಾಸಿಯಾಗಿದ್ದು, ಕಟ್ಟಡ ಕಾರ್ಮಿಕನೆಂದು ತಿಳಿಸಿದ್ದಾನೆ. ಕೃತ್ಯಕ್ಕೆ ಬಳಸಿದ್ದ 7 ಎಟಿಎಂ ಕಾರ್ಡ್‌ಗಳನ್ನು ಆತನಿಂದ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಡಿಜಿಟಲ್‌ ತಿಳುವಳಿಕೆ ಇಲ್ಲದ ವಯೋವೃದ್ಧರು, ಮಹಿಳೆಯರಿಗೆ ಸಹಾಯ ಮಾಡುವುದಾಗಿ ತಿಳಿಸಿ, ಅವರಿಗೆ ಗೊತ್ತಿಲ್ಲದೆ ಎಟಿಎಂ ಕಾರ್ಡ್‌ಗಳನ್ನು ಬದಲಿಸುತ್ತಿದ್ದ, ಪಿನ್‌ ಪಡೆದು ಕಾರ್ಡ್‌ ಕೆಲಸ ಮಾಡುತ್ತಿಲ್ಲವೆಂದು ಹೇಳಿ ವಂಚಿಸುತ್ತಿದ್ದ.

ತನಿಖೆಯಿಂದ ಕೆ.ಆರ್.ನಗರದಲ್ಲಿ 2, ಎಚ್.ಡಿ.ಕೋಟೆ, ಪಿರಿಯಾಪಟ್ಟಣ, ಹುಣಸೂರು ಪಟ್ಟಣ ಪೊಲೀಸ್‌ ಠಾಣೆಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ’ ಎಂದರು.

ಕೆ.ಆರ್‌.ನಗರದಲ್ಲಿ ಫೆ.2ರಂದು ಮಹಿಳೆಯೊಬ್ಬರಿಗೆ ಹಾಗೂ ಮೇ 4ರಂದು ತಿಮ್ಮಶೆಟ್ಟಿ ಎಂಬುವರಿಗೆ ಸಹಾಯ ಮಾಡುವ ನೆಪದಲ್ಲಿ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿದ್ದವು. ಕೆ.ಆರ್‌.ನಗರದ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಲವ ನೇತೃತ್ವದ ತಂಡವು ಸಿಸಿಟಿವಿ ಕ್ಯಾಮೆರಾ ಮಾಹಿತಿ ಆಧಾರಿಸಿ ಸಿಬ್ಬಂದಿಯನ್ನು ಎಟಿಎಂ ಕೇಂದ್ರಗಳಲ್ಲಿ ನೇಮಿಸಿತ್ತು. 30ರ ಸೋಮವಾರ ಅನುಮಾನಾಸ್ಪದವಾಗಿ ಎಟಿಎಂ ಕೇಂದ್ರದಲ್ಲಿ ಸುತ್ತಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಯಿತು’ ಎಂದು ಚೇತನ್‌ ಮಾಹಿತಿ ನೀಡಿದರು.