ಮನೆ ಅಪರಾಧ ಕಾರು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಕಳ್ಳರ ಬಂಧನ

ಕಾರು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ನಾಲ್ವರು ಕಳ್ಳರ ಬಂಧನ

0

ಚಾಮರಾಜನಗರ: ಚಲಿಸುತ್ತಿದ್ದ ಕಾರ್ ಅಡ್ಡಗಟ್ಟಿ ಸುಲಿಗೆ ಮಾಡಿದ್ದ ನಾಲ್ವರು ಖತರ್‌ನಾಕ್ ಕಳ್ಳರನ್ನು ಬಂಧಿಸುವಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಮೂಲದ ಭರತ್, ಹನುಮೇಗೌಡ, ಬಂಗಾರಪೇಟೆಯ ಕಿರಣ್, ತುಮಕೂರಿನ ಪ್ರತಾಪ್ ಬಂಧಿತ ಆರೋಪಿಗಳು. ಇವರುಗಳು ಈ ಹಿಂದೆ ಗ್ಯಾಂಗ್‌ವಾರ್‌ಗಳಲ್ಲಿ ಭಾಗಿಯಾಗಿದ್ರು ಎನ್ನಲಾಗಿದೆ.
ತಮಿಳುನಾಡು ಮೂಲದ ಶಿವ ಮತ್ತು ದಿನೇಶ್ ಎಂಬುವರು ಕೇರಳದಿಂದ ಕೊಳ್ಳೇಗಾಲ ಮಾರ್ಗವಾಗಿ ಮಹದೇಶ್ವರ ಬೆಟ್ಟಕ್ಕೆ ಕಾರಿನಲ್ಲಿ ತೆರಳುತ್ತಿದ್ರು. ಈ ವೇಳೆ ಅವರನ್ನು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಧುವನಹಳ್ಳಿ ಬಳಿ ಅಡ್ಡಗಟ್ಟಿದ ಸುಲಿಗೆಕೋರರು ಎಂಟು ಸಾವಿರ ನಗದು ಮತ್ತು ರೆಡ್ ಮಿ ಫೋನನ್ನು ಕಸಿದು ಕಾರಿನ ಗ್ಲಾಸನ್ನು ಒಡೆದು ಪರಾರಿಯಾಗಿದ್ದರು.
ಈ ಬಗ್ಗೆ ಶಿವ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್ ಪಿ ಅವರುಗಳ ಮಾರ್ಗದರ್ಶನದಂತೆ ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್ ಮುಧೋಳ್, ಪಿಎಸ್ಐ ಗಳಾದ ಆರ್.ಮಂಜುನಾಥ್, ವೀರಣ್ಣಾರಾಧ್ಯ ಮತ್ತು ವಿ.ಚೇತನ್ ಅವರನ್ನೊಳಗೊಂಡ ತಂಡ ರಚಿಸಿ ತನಿಖೆ ಪ್ರಾರಂಭಿಸಲಾಗಿತ್ತು.
ಅದರAತೆ ಸುಮಾರು ಒಂದೂವರೆ ತಿಂಗಳ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡ ಬಂಗಾರಪೇಟೆ, ದೇವನಹಳ್ಳಿ, ರಾಜಾನುಕುಂಟೆ ಮತ್ತು ತುಮಕೂರಿನಲ್ಲಿ ಆರೋಪಿಗಳನ್ನು ಬಂಧಿಸಿ ಇದೀಗ ಜೈಲಿಗಟ್ಟಿದ್ದಾರೆ.
ಪೊಲೀಸ್ ತಂಡದ ಕಾರ್ಯಕ್ಕೆ ಚಾಮರಾಜನಗರ ಎಸ್ಪಿಯವರು ಪ್ರಶಂಸೆ ವ್ಯಕ್ತಪಡಿಸಿ ನಗದು ಬಹುಮಾನ ಘೋಷಿಸಿದ್ದಾರೆ.

ಹಿಂದಿನ ಲೇಖನಆಹಾರ ತಯಾರಿಕ ಘಟಕ, ಅಂಗಡಿಗಳ ಪರಿಶೀಲನೆ ಬಗ್ಗೆ ಗಮನಹರಿಸಿ: ಜಿಲ್ಲಾಧಿಕಾರಿ
ಮುಂದಿನ ಲೇಖನಪೊಲೀಸರೆಂದು ಹೇಳಿಕೊಂಡು ಬಂದವರಿಂದ ಚೇತನ್ ಅಪಹರಣ: ಪತ್ನಿ ಮೇಘಾ ಆರೋಪ