ಮನೆ ಅಪರಾಧ ಬಂಧಿಸಲು ಬಂದ ಪೊಲೀಸರಿಗೆ ರಿವಾಲ್ವರ್ ತೋರಿಸಿ ಪರಾರಿಯಾಗಿದ್ದ ಆರೋಪಿಯ ಬಂಧನ

ಬಂಧಿಸಲು ಬಂದ ಪೊಲೀಸರಿಗೆ ರಿವಾಲ್ವರ್ ತೋರಿಸಿ ಪರಾರಿಯಾಗಿದ್ದ ಆರೋಪಿಯ ಬಂಧನ

0

ಬೆಂಗಳೂರು(Bengaluru): ತನ್ನನ್ನು ಬಂಧಿಸಲು ಬಂದ ಕೇರಳ ಪೊಲೀಸರಿಗೆ ರಿವಾಲ್ವರ್‌ನಿಂದ ಬೆದರಿಸಿ ಪರಾರಿಯಾಗಿದ್ದ ಆರೋಪಿ ಜಾಫರ್ ಎಂಬುವರನ್ನು ನಗರದ ಎಚ್‌ಎಸ್‌ಆರ್‌ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡ್ರಗ್ಸ್ ಮಾರಾಟ ಜಾಲದ ರೂವಾರಿ ಜಾಫರ್ ಕೇರಳದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದ. ತನ್ನನ್ನು ಹಿಡಿಯಲು ಬಂದ ಪೊಲೀಸರನ್ನು ಬೆದರಿಸಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಏನಿದು ಪ್ರಕರಣ ? ಜಾಫರ್ ಕೇರಳದಲ್ಲಿ ಸಹಚರರ ಮೂಲಕ ಮಾದಕ ವಸ್ತು ಮಾರಾಟ ಮಾಡಿಸುತ್ತಿದ್ದ. ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕುರತಿಕ್ಕಾಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನ ಭೀತಿಯಲ್ಲಿದ್ದ ಆರೋಪಿ ಜಾಫರ್, ಸಹಚರರ ಸಮೇತ ಕೇರಳ ತೊರೆದು ಬೆಂಗಳೂರಿಗೆ ಬಂದಿದ್ದ. ಈತನನ್ನು ಹುಡುಕಿಕೊಂಡು ಕುರತಿಕ್ಕಾಡ್ ಪಿಎಸ್‌ಐ ನೇತೃತ್ವದ ತಂಡವೂ ಬೆಂಗಳೂರಿಗೆ ಬಂದಿತ್ತು.

ಎಚ್‌ಎಸ್‌ಆರ್ ಲೇಔಟ್ ಠಾಣೆ ವ್ಯಾಪ್ತಿಯ ಹೋಟೆಲೊಂದರಲ್ಲಿ ಆರೋಪಿ ಇತ್ತೀಚೆಗೆ ಕಾಣಿಸಿಕೊಂಡಿದ್ದ. ಮಾಹಿತಿ ತಿಳಿದ ಪಿಎಸ್‌ಐ ನೇತೃತ್ವದ ತಂಡ, ಬಂಧಿಸಲು ಮುಂದಾಗಿತ್ತು. ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿ, ಸಹಚರರ ಸಮೇತ ಸ್ಥಳದಿಂದ ಪರಾರಿಯಾಗಿದ್ದ ಎಂದು ತಿಳಿಸಿವೆ.

ಆರೋಪಿ ಪರಾರಿಯಾದ ಬಗ್ಗೆ ಕುರತಿಕ್ಕಾಡ್ ಪಿಎಸ್‌ಐ, ಎಚ್‌ಎಸ್‌ಆರ್‌ ಲೇಔಟ್ ಠಾಣೆಗೆ ಮಾಹಿತಿ ನೀಡಿದ್ದರು. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಹಿಂದಿನ ಲೇಖನಮುಂದಿನ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲಿದೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಬೆಳಗಾವಿಯಲ್ಲಿ ಮಳೆ ಹಾನಿ: ಕೇಂದ್ರ ತಂಡದಿಂದ ಪರಿಶೀಲನೆ