ಮನೆ ದೇವಸ್ಥಾನ ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ 4ನೇ ತಿರುನಾಳ್ ಶ್ರೀಕೃಷ್ಣ ರಾಜಮುಡಿ ಉತ್ಸವ

ಮೇಲುಕೋಟೆ ಚೆಲುವನಾರಾಯಣ ಸ್ವಾಮಿಯ 4ನೇ ತಿರುನಾಳ್ ಶ್ರೀಕೃಷ್ಣ ರಾಜಮುಡಿ ಉತ್ಸವ

0

ಮೇಲುಕೋಟೆ(Melukote): ಪ್ರಸಿದ್ದ ಚೆಲುವನಾರಾಯಣ ಸ್ವಾಮಿಯ 4ನೇ ತಿರುನಾಳ್ ಶ್ರೀಕೃಷ್ಣ ರಾಜಮುಡಿ ಉತ್ಸವ ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು.

ಮಂಡ್ಯ ಜಿಲ್ಲಾ ಖಜಾನೆಯಿಂದ ಪೊಲೀಸ್‌ ಭದ್ರತೆಯೊಂದಿಗೆ ಬಂದ ವಜ್ರಖಚಿತ ಶ್ರೀಕೃಷ್ಣ ರಾಜಮುಡಿ ಕಿರೀಟವನ್ನು ದೇವಸ್ಥಾನದಲ್ಲಿ ಭಕ್ತಿಯಿಂದ ಸ್ವಾಗತಿಸಲಾಯಿತು. ಬಳಿಕ ಕಿರೀಟವನ್ನು ವೇದಾಂತ ದೇಶಿಕರ ಸನ್ನಿಧಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲನೆ ನಡೆಸಲಾಯಿತು.

ಶ್ರೀದೇವಿ ಮತ್ತು ಭೂದೇವಿ ಅಮ್ಮನವರ ಸಮೇತ ಗರುಡಾರೂಢ ನಾದ ಚೆಲುವನಾರಾಯಣ ಸ್ವಾಮಿಗೆ ವಜ್ರಖಚಿತ ಕೃಷ್ಣರಾಜಮುಡಿ ಕಿರೀಟ ಧಾರಣೆ ಮಾಡಲಾಯಿತು. ವಿವಿಧ ಆಭರಣ, ಹೂಗಳಿಂದ ಸ್ವಾಮಿಯನ್ನು ಅಲಂಕರಿಸಲಾಗಿತ್ತು. ಗರುಡದೇವನಿಗೆ ಮೆರವಣಿಗೆ ಮಾಡಿದ ನಂತರ ಮಹಾ ಮಂಗಳಾರತಿ ನೆರವೇರಿಸಿ, ಕೃಷ್ಣ ರಾಜಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಜಿಲ್ಲಾ ಖಜಾನೆಯಿಂದ ಹೊರಟ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಶಿವಳ್ಳಿ, ದುದ್, ಜಕ್ಕನಹಳ್ಳಿ ಸರ್ಕಲ್ ಮಾರ್ಗವಾಗಿ ಮೇಲುಕೋಟೆಗೆ ತರಲಾಯಿತು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಶೀಲ್ದಾರ್ ಎಸ್.ಎಲ್.ನಯನಾ, ದೇವಾಲಯದ ಇಒ ಮಂಗಳಮ್ಮ ಇದ್ದರು.

ಮೈಸೂರು ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ತಮ್ಮ ಮನೆ ದೇವರು ಚೆಲುವನಾರಾಯಣ ಸ್ವಾಮಿಗೆ ಕೆಂಪು, ಬಿಳಿ ವಜ್ರದ ಪಚ್ಚೆಮಣಿಯ ಸಿಂಹಲಾಂಛನವುಳ್ಳ ಕೃಷ್ಣರಾಜಮುಡಿ ಅರ್ಪಿಸಿದ್ದರು.

ಕೃಷ್ಣರಾಜಮುಡಿ ಕಿರೀಟವನ್ನು ಜುಲೈ 25ರವರೆಗೆ ಪ್ರತಿದಿನ ಸಂಜೆ ವಿವಿಧ ಉತ್ಸವದಲ್ಲಿ ಚೆಲುವರಾಯಸ್ವಾಮಿಯನ್ನು ಅಲಂಕರಿಸಿ ಪೂಜಿಸಲಾಗುತ್ತದೆ.

ಹಿಂದಿನ ಲೇಖನಕಸ್ತೂರಿ ರಂಗನ್ ವರದಿ: ಪರಿಸರ ಸೂಕ್ಷ್ಮ ವಲಯದಲ್ಲಿನ ಮೈಸೂರು ಜಿಲ್ಲೆ ಹಳ್ಳಿಗಳ ಮಾಹಿತಿ
ಮುಂದಿನ ಲೇಖನಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ವಿರುದ್ಧ ಚುನಾವಣಾ ಆಯೋಗಕ್ಕೆ ದೂರು