ಮನೆ ಅಪರಾಧ ಹೈದರಾಬಾದ್‌: ಉಗ್ರ ದಾಳಿಗೆ ಸಂಚು ರೂಪಿಸಿದ್ದ ಮೂವರ ಬಂಧನ

ಹೈದರಾಬಾದ್‌: ಉಗ್ರ ದಾಳಿಗೆ ಸಂಚು ರೂಪಿಸಿದ್ದ ಮೂವರ ಬಂಧನ

0

ಹೈದರಾಬಾದ್‌(Hyderabad) : ಉಗ್ರ ದಾಳಿಗೆ ಸಂಚು ರೂಪಿಸಿದ್ದ, ಐಎಸ್ಐ​- ಎಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಪಾಕಿಸ್ತಾನದ ಮೂವರನ್ನು ಪೊಲೀಸರು ನಗರದಲ್ಲಿ ಭಾನುವಾರ ಬಂಧಿಸಿದ್ದಾರೆ.

ಹೈದರಾಬಾದ್‌ನ ಮುಸಾರಾಂಬಾಗ್‌ ನಿವಾಸಿಯಾದ ಅಬ್ದುಲ್‌ ಜಾಹೇದ್‌, ಸೈದಾಬಾದ್​ನ ಸಮೀರುದ್ದೀನ್ ಮತ್ತು ಮೆಹದಿಪಟ್ಟಣಂನ ಹಸನ್ ಫಾರೂಕಿ ಬಂಧಿತರು.

ಬಂಧಿತರಿಂದ 4 ಗ್ರೆನೇಡ್​, 5 ಲಕ್ಷ ರೂಪಾಯಿ ನಗದು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ನಗರದಲ್ಲಿ ಉಗ್ರ ದಾಳಿಗೆ ಯೋಜನೆ ಹೆಣೆಯಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಭಾನುವಾರ ಮಧ್ಯರಾತ್ರಿ ದಿಢೀರ್​ ದಾಳಿ ನಡೆಸಿದ ಎಸ್​ಐಟಿ ಪೊಲೀಸರು ಉಗ್ರರ ಜಾಡು ಪತ್ತೆ ಹಚ್ಚಿದ್ದಾರೆ. ಈ ಹಿಂದೆ ಬೇಗಂಪೇಟೆ ಟಾಸ್ಕ್​ಫೋರ್ಸ್ ಕಚೇರಿಯಲ್ಲಿ ನಡೆದ ಸ್ಫೋಟ ಸೇರಿದಂತೆ ಹಲವು ಘಟನೆಗಳಲ್ಲಿ ಬಂಧಿತ ಜಾಹೇದ್ ಭಾಗವಹಿಸಿದ್ದ.

ಬೇಗಂಪೇಟೆ ಸ್ಫೋಟ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಫರ್ಹತುಲ್ಲಾ ಮತ್ತು ಅಬ್ದುಲ್ ಮಜೀದ್ ಪಾಕಿಸ್ತಾನದಲ್ಲಿದ್ದುಕೊಂಡೇ ಹೈದರಾಬಾದ್​ನಲ್ಲಿ ದಾಳಿ ನಡೆಸುವ ಯೋಜನೆ ರೂಪಿಸಿದ್ದರು. ಇದಕ್ಕಾಗಿಯೇ ಸದ್ಯ ಬಂಧಿತರಾಗಿರುವ ಆರೋಪಿಗಳನ್ನು ನೇಮಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

2013 ರಲ್ಲಿ ಸಾಯಿಬಾಬಾ ದೇವಸ್ಥಾನದ ಬಳಿ ಸ್ಫೋಟ, ಮುಂಬೈನ ಘಾಟ್‌ಕೋಪರ್‌ನಲ್ಲಿ ಬಸ್ ಸ್ಫೋಟ, 2005 ರಲ್ಲಿ ಬೇಗಂಪೇಟೆಯ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ಆತ್ಮಾಹುತಿ ದಾಳಿಯ ರೂವಾರಿಗಳಾದ ಫರ್ಹತುಲ್ಲಾ ಘೋರಿ, ಸಿದ್ದಿಕ್ ಬಿನ್ ಒಸ್ಮಾನ್ ಮತ್ತು ಅಬ್ದುಲ್ ಮಜೀದ್ ತಪ್ಪಿಸಿಕೊಂಡು ಪಾಕಿಸ್ತಾನದಲ್ಲಿ ನೆಲೆಸಿದ್ದು, ಅಲ್ಲಿಂದಲೇ ಮತ್ತೊಮ್ಮೆ ಉಗ್ರ ದಾಳಿಗೆ ಯೋಜನೆ ರೂಪಿಸಿದ್ದಾರೆ.

ಐಎಸ್‌ಐ ಜೊತೆ ಸಂಪರ್ಕ ಬೆಳೆಸಿಕೊಂಡು ದಾಳಿಗೆ ಸ್ಕೆಚ್​ ಹಾಕಿರುವ ಉಗ್ರರು ಇಲ್ಲಿನ ಯುವಕರನ್ನು ನೇಮಿಸಿಕೊಂಡು ಜಾಲ ಬೀಸುತ್ತಿದ್ದಾರೆ. ಸಾರ್ವಜನಿಕ ಸಭೆಗಳನ್ನು ಗುರಿಯಾಗಿಸಿಕೊಂಡು ಗ್ರೆನೇಡ್‌ಗಳನ್ನು ಎಸೆಯಲು ಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.