ಹನೂರು(Hanur): ವಿವಿಧೆಡೆ ಬೈಕ್ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಅಜೀಜ್ಸೇಠ್ ನಗರದ ಅಖ್ತಾರ್ಖಾನ್ (23) ಆಲಿಯಾಸ್ ಅಖ್ತಾರ್ ಹಾಗೂ ಕೆಸರೆಯ ದಸ್ತಗೀರ್ ಆಹಮದ್ ಖಾನ್ ಆಲಿಯಾಸ್ ಅರ್ಮಾನ್ ಎಂಬುವವರೇ ಬಂಧಿತ ಆರೋಪಿಗಳು.
ಇವರು ವಿವಿಧೆಡೆ ಬೈಕ್ಗಳನ್ನು ಕಳ್ಳತನ ಮಾಡಿ ಇತರರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಅವರ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ಪ್ರಸಾದ್, ಎಎಸ್ಐ ಕೃಷ್ಣ, ಮುಖ್ಯ ಪೇದೆಗಳಾದ ಮಹದೇವಸ್ವಾಮಿ, ಚಂದ್ರು, ಪೇದೆಗಳಾದ ರಾಮಕೃಷ್ಣ, ಶಿವಕುಮಾರ್ ತಂಡ ಆ.4 ರಂದು ಪಟ್ಟಣದ ಬಂಡಳ್ಳಿ ರಸ್ತೆಯಲ್ಲಿ ದಾಳಿ ನಡೆಸಿ ಬಂಧಿಸಿದ್ದರು.
ನಂತರ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಬಂಧಿತರು 4 ಬೈಕ್ಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದು, 2 ಬೈಕ್ಗಳನ್ನು ಕೊಳ್ಳೇಗಾಲದಲ್ಲಿ ಹಾಗೂ ಒಂದು ಬೈಕ್ ಅನ್ನು ಹನೂರಿನ ಆರ್.ಎಸ್ ದೊಡ್ಡಿಯಲ್ಲಿ ಮಾರಾಟ ಮಾಡಲಾಗಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದರು.
ಮಾರಾಟ ಮಾಡಿರುವ ಬೈಕ್ಗಳನ್ನು ವಶಪಡಿಸಿಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.