ಮನೆ ದೇವಸ್ಥಾನ ಆಷಾಡ ಮಾಸದ ನಾಲ್ಕನೇ ಶುಕ್ರವಾರ: ಚಾಮುಂಡೇಶ್ವರಿ ದೇವಿಗೆ ಸಿಂಹವಾಹಿನಿ ಅಲಂಕಾರ

ಆಷಾಡ ಮಾಸದ ನಾಲ್ಕನೇ ಶುಕ್ರವಾರ: ಚಾಮುಂಡೇಶ್ವರಿ ದೇವಿಗೆ ಸಿಂಹವಾಹಿನಿ ಅಲಂಕಾರ

0

ಮೈಸೂರು(Mysuru): ಆಷಾಢ ಮಾಸದ ನಾಲ್ಕನೇ ಶುಕ್ರವಾರದಂದು ದೇವಿಗೆ ‘ಸಿಂಹವಾಹಿನಿ’ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ತಾಯಿಯ ದರ್ಶನ ಪಡೆದರು.

ಮುಂಜಾನೆ 3.30ರಿಂದ ದೇಗುಲದಲ್ಲಿ ಪೂಜೆ ಆರಂಭವಾಯಿತು. ದೇವಿಯ ಮೂರ್ತಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಮಾಭಿಷೇಕ, ಸಹಸ್ರ ನಾಮಾರ್ಚನೆ ಸಲ್ಲಿಸಲಾಯಿತು. ಬೆಳಿಗ್ಗೆ 5.30ಕ್ಕೆ ದೇವಿಗೆ ಸಿಂಹವಾಹಿನಿ ಅಲಂಕಾರ ಪೂರ್ಣಗೊಳಿಸಲಾಯಿತು.  ನಂತರ ಬೆಳಿಗ್ಗೆ 6 ಗಂಟೆಯಿಂದ ದರ್ಶನಕ್ಕೆ ಅವಕಾಶ ನೀಡಲಾಯಿತು. ದೇಗುಲವನ್ನು ಬಣ್ಣಬಣ್ಣದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಪ್ರಸಾದ ವಿನಿಯೋಗ ನಡೆಯಿತು.

ಮುಂಜಾನೆಯಿಂದಲೇ ಚಳಿ, ತುಂತುರು ಮಳೆಯಲ್ಲೇ ಕೊಡೆ ಹಿಡಿದ ಭಕ್ತರು ಮೆಟ್ಟಿಲು ಹತ್ತಿದರು. ಅರಿಶಿಣ –ಕುಂಕುಮವನ್ನು 1,101 ಮೆಟ್ಟಿಲುಗಳಿಗೆ ಹಚ್ಚಿ ಹರಕೆ ತೀರಿಸಿದರು. ಕಳೆದ ಮೂರು ಆಷಾಢ ಶುಕ್ರವಾರಕ್ಕೆ ಹೋಲಿಸಿದರೆ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚಿತ್ತು.

ತಮಿಳುನಾಡಿನಿಂದ ಭಕ್ತರ ಆಗಮನ: ನಾಲ್ಕನೇ ಆಷಾಢ ಶುಕ್ರವಾರ ತಮಿಳುನಾಡಿನ ಭಕ್ತರಿಗೆ ‘ಆದಿ ಶುಕ್ರವಾರ’ವಾದ್ದರಿಂದ ಈರೋಡ್‌, ಸೇಲಂ, ಸತ್ಯಮಂಗಲ, ಚೆನ್ನೈನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ವಿಶೇಷ ಪೂಜೆಯನ್ನು ಸಲ್ಲಿಸಿದರು.

ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಎಂದಿನಂತೆ ಜನರು ವಾಹನಗಳನ್ನು ಲಲಿತಮಹಲ್‌ ಅರಮನೆ ಸಮೀಪದ ಜಾಗದಲ್ಲಿ ನಿಲ್ಲಿಸಿ, ಅಲ್ಲಿಂದ ಸಾರಿಗೆ ಬಸ್‌ಗಳಲ್ಲಿ ಬೆಟ್ಟಕ್ಕೆ ಉಚಿತವಾಗಿ ಪ್ರಯಾಣಿಸಿದರು.