ಮನೆ ಸುದ್ದಿ ಜಾಲ ತಾಯಿಯ ಮಹತ್ವ ಸಾರಲಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

ತಾಯಿಯ ಮಹತ್ವ ಸಾರಲಿರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

0

ಮೈಸೂರು: ಕೊರೊನಾ, ವಿವಾದ, ಪ್ರತಿಭಟನೆ ಸೇರಿದಂತೆ ಹಲವಾರು ವೈರುದ್ಯಗಳ ನಡುವೆಯೂ ಬಹುರೂಪಿ  ರಾಷ್ಟ್ರೀಯ ನಾಟಕೋತ್ಸವ  ನಡೆಯುತ್ತಿರುವುದು ರಂಗಾಸಕ್ತರ ಸಂತಸಕ್ಕೆ ಕಾರಣವಾಗಿದೆ.

ಮಾರ್ಚ್ 11ರಿಂದ ಆರಂಭವಾಗಿ ಮಾರ್ಚ್ 20ರವರೆಗೆ ಸುಮಾರು 9 ದಿನಗಳ ಕಾಲ ನಾಟಕೋತ್ಸವ ನಡೆಯಲಿದೆ. ಈ ಬಾರಿ ತಾಯಿ ವಸ್ತುವಿಷಯಾಧಾರಿತವಾಗಿ ನಾಟಕೋತ್ಸವ ನಡೆಯುತ್ತಿರುವುದು ವಿಶೇಷವಾಗಿದೆ. ಜತೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಬದಲಾಗಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಎಂದು ಹೆಸರು ಬದಲಾಯಿಸಲಾಗಿದೆ.

ಮಾರ್ಚ್ 11ರಂದು ಸಂಜೆ 5.30ಕ್ಕೆ ವನರಂಗದಲ್ಲಿ ನಾಟಕೋತ್ಸವ ಆರಂಭವಾಗುತ್ತಿದ್ದು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿಗೌಡ ಚಾಲನೆ ನೀಡಲಿದ್ದಾರೆ. ಉಡುಪಿಯಲ್ಲಿ 7 ಕೋಟಿ ವೆಚ್ಚದಲ್ಲಿ ರಂಗಾಯಣ ಕಟ್ಟಡ ನಿರ್ಮಾಣ ಈ ಬಾರಿ 35 ನಾಟಕಗಳನ್ನು ಆಯ್ಕೆ ಮಾಡಿದ್ದು, ತಮಿಳು, ರಾಜಸ್ಥಾನಿ, ಒರಿಯಾ, ಮಲಯಾಳಂ, ತುಳು, ತೆಲುಗು ಸೇರಿದಂತೆ 12 ಭಾಷೆಯ ನಾಟಕಗಳು ಪ್ರದರ್ಶನವಾಗಲಿವೆ. ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಾಟಕಗಳೂ ಇವೆ. ಇದರೊಂದಿಗೆ 20 ಕನ್ನಡ ನಾಟಕಗಳು ಇರಲಿವೆ. ವೃತ್ತಿ ಕಂಪನಿ ನಾಟಕ, ಪೌರಾಣಿಕ ನಾಟಕಕ್ಕೂ ಅವಕಾಶ ನೀಡಲಾಗಿದೆ. ಬಯಲಾಟ, ಯಕ್ಷಗಾನ, ದೊಡ್ಡಾಟ, ಗೊಂಬೆಯಾಟಕ್ಕೂ ವೇದಿಕೆ ಕಲ್ಪಿಸಲಾಗಿದೆ.

ಜಾನಪದ ಕಲಾ ಪ್ರದರ್ಶನ; ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, ಜೋಗತಿ ನೃತ್ಯ, ಮಲ್ಲಕಂಬ, ಸಿದ್ಧಿ ಕುಣಿತ, ಲಂಬಾಣಿ ನೃತ್ಯ, ಚಂಡೆ ಮೇಳ, ಗೊಂಬೆ ಗಾರುಡಿಗ ಇನ್ನಿತರ ಪ್ರಕಾರದ ಕಲೆಗಳ ಪ್ರದರ್ಶನ ಇರಲಿದೆ. ಇದರಲ್ಲಿ ಶೇ.50ರಷ್ಟು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಇದರೊಂದಿಗೆ ಹೊರ ರಾಜ್ಯಗಳ ಜಾನಪದ ಕಲೆಗಳಾದ ಛತ್ತೀಸ್‌ಘಡದ ಕಕ್ಸರ್‌ನೃತ್ಯ, ಮಧ್ಯಪ್ರದೇಶದ ಬಾಗೋರಿಯಾ, ಮಹಾರಾಷ್ಟ್ರದ ಢಾಂಗಾಲಿಯಾ, ಒರಿಸ್ಸಾದ ಗೋಟಿಪೂವಾ, ಮಣಿಪುರದ ಲಾಯ್ ಹರೋಬ, ಕೇರಳದ ಕಳರಿಪಯಟ್ ನೃತ್ಯ ಈ ಸಲದ ವಿಶೇಷತೆ.

ಮಾರ್ಚ್ 19 ಮತ್ತು 20ರಂದು ತಾಯಿ ಹೆಸರಿನಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಬಿ. ವಿ. ಕಾರಂತ ರಂಗಚಾವಡಿಯಲ್ಲಿ ನಿತ್ಯ ಸಂಜೆ 4ರಿಂದ 5ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯುವುದರೊಂದಿಗೆ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಮಾತೃ ದೇವೋಭವ ಕುರಿತು ಪ್ರೊ. ಕೃಷ್ಣೇಗೌಡ, ಕನ್ನಡ ಕಾವ್ಯಗಳಲ್ಲಿ ತಾಯಿ ಕುರಿತು ಹಿರೇಮಗಳೂರು ಕಣ್ಣನ್ ಮತ್ತು ತಾಯಿ ಮತ್ತು ತಾಯ್ತನದ ಬಗ್ಗೆ ಚಕ್ರವತಿ ಸೂಲಿಬೆಲೆ ವಿಚಾರ ಮಂಡಿಸಲಿದ್ದಾರೆ.

ಸಿನಿಮಾ ಪ್ರದರ್ಶನ; ಚಲನಚಿತ್ರೋತ್ಸವದಲ್ಲಿ ತಾಯಿ ಪರಿಕಲ್ಪನೆಯ 2 ಕನ್ನಡ ಚಿತ್ರಗಳು ಸೇರಿದಂತೆ 25 ಸಿನಿಮಾಗಳು ಪ್ರದರ್ಶನವಾಗಲಿದ್ದು, ದಿವಂಗತ ಪುನೀತ್ ರಾಜ್‌ಕುಮಾರ್ ಅಭಿಯನದ ‘ರಾಜ್‌ಕುಮಾರ್’ ಮತ್ತು ಡಾ. ರಾಜ್‌ಕುಮಾರ್ ನಟಿಸಿರುವ ‘ಬಬ್ರುವಾಹನ’ ಚಿತ್ರವೂ ಸೇರಿದೆ.

ಹಿಂದಿನ ಲೇಖನರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಅಸ್ಸಾಂ ಸಿಎಂ ವಿರುದ್ಧ ಪ್ರಕರಣ ದಾಖಲು
ಮುಂದಿನ ಲೇಖನಎನ್​ಎಸ್​​ಎ ಅಜಿತ್ ದೋವಲ್ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿಯ ಬಂಧನ