ಮನೆ ಯೋಗಾಸನ ಅಷ್ಟಾಂಗ ಯೋಗ

ಅಷ್ಟಾಂಗ ಯೋಗ

0

ಪತಂಜಲಿ ಯೋಗ ಸೂತ್ರಗಳು ನಾಲ್ಕು ಪಾದಗಳಾಗಿ ವಿಂಗಡಿಸಲ್ಪಟ್ಟಿದೆ. ಮೊದಲನೆಯದು ಸಮಾಧಿಯನ್ನೂ, ಎರಡನೆಯದು ಸಾಧನವನ್ನೂ, ಮೂರನೆಯದು ವಿಭೂತಿಯನ್ನೂ, ನಾಲ್ಕನೆಯದು ಕೈವಲ್ಯವನ್ನೂ ಚರ್ಚಿಸುತ್ತದೆ.

ಯಮ :-

ಎರಡನೇಯ ಅಧ್ಯಾಯನದಲ್ಲಿ ಯೋಗದ ಎಂಟು ಅಂಗಗಳನ್ನು ವಿವೇಚಿಸಲಾಗಿದೆ. ಮೊದಲನೆಯದು ಯಮ ಎಂದರೆ ನೈತಿಕ ಸೂತ್ರಗಳು. ಅವು ದೇಶ, ಕಾಲ, ಜನಾಂಗಗಳಿಗೆ ಅತೀಯವಾದವು. ಅವು ಯಾವುವೆಂದರೆ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ,ಅಪರಿಗ್ರಹ. ಇವು ವ್ಯಕ್ತಿಗೂ ಸಮಾಜಕ್ಕೂ ಅನ್ವಯವಾಗುವ ಅಚರಣಾ ಧರ್ಮಗಳು. ಅವುಗಳನ್ನು ಪಾಲಿಸದಿದ್ದಲ್ಲಿ ಎಲ್ಲ ರೀತಿಯ ಎಲ್ಲ ರೀತಿಯ ಕೇಡು, ಹಿಂಸೆ, ಅಸತ್ಯ, ಕಳ್ಳತನ, ಅಪವ್ಯಯ, ಆಸೆ ಬುರುಕುತನ ಮುಂತಾದವು ಉತ್ಪನ್ನವಾಗುತ್ತದೆ. ಪತಂಜಲಿಯು “ಯಮ” ಮೊದಲಾದ ಪಂಚವಿಧಾನಗಳಿಂದ ಮನುಷ್ಯನ ಮನದ ಗತಿಯನ್ನೇ ತಿರುಗಿಸಿ, ಈ ಕೆಡಕುಗಳ ಮೂಲಕ್ಕೇ ಪೆಟ್ಟು ಬೀಳುವಂತೆ ಮಾಡುತ್ತಾನೆ

ಅಹಿಂಸಾ :-

ಹಿಂಸೆ ಎಂದರೆ ಸಾಯಿಸುವಿಕೆ. ಅದಕ್ಕೆ ವಿರುದ್ಧವಾದದ್ದು ಅಹಿಂಸೆ. ಆದರೆ ಅದಕ್ಕೆ ಕೇವಲ ನಕಾರದ ಶಕ್ತಿಯೊಂದೇ ಅಲ್ಲದೆ ವಿಸ್ತಾರವಾದ ಭಾವರೂಪವೂ ಇದೆ. ಎಂದರೆ ಪ್ರೇಮ, ವಿಶ್ವಾಸ ಎಂಬ ಭಾವ. ಈ ಪ್ರೇಮ ದೇವರ ಸೃಷ್ಟಿಯಲ್ಲಿಯೇ ಎಲ್ಲಾ ಮಕ್ಕಳಿಗೂ ಅನ್ವಯವಾಗುತ್ತದೆ. ಯೋಗಿಯ ದೃಷ್ಟಿಯಲ್ಲಿ ಯಾವ ಪ್ರಾಣಿಯನ್ನು ಕೊಂದರೂ ದೇವರಿಗೆ ಅಪಚಾರ ಮಾಡಿದಂತೆಯೇ. ಮಾನವರ ತಮ್ಮ ಆಹಾರಕ್ಕಾಗಿ ಅಥವಾ ತಮ್ಮ ರಕ್ಷಣೆಗಾಗಿ ಕೊಲ್ಲಲು ತೊಡಗುತ್ತಾರೆ. ಒಬ್ಬನು ಸಸ್ಯಾಹಾರಿ ಆದ ಮಾತ್ರಕ್ಕೆ ಅಹಿಂಸೆಯನ್ನು ಪಾಲಿಸುವ ನೆಂದರ್ಥವಲ್ಲ. ಆತನು ಯೋಗಿಯೂ ಆಗಲಾರ. ಸಸ್ಯಹಾರ ಯೋಗಾಭ್ಯಾಸಕ್ಕೆ ಅಗತ್ಯವೆನ್ನುವುದೇನೋ ನಿಜ. ರಕ್ತದಾಹವಿರುವ ನಿರಂಕುಶರಾಜರು ಸಸ್ಯಹಾರಿಗಳಾಗಿಯೇ ಇರಬಹುದು. ಆದರೆ ಹಿಂಸೆ ಎನ್ನುವುದು ಮನಸ್ಸಿನ ಭಾವವಲ್ಲದ ಆಹಾರಕ್ಕೆ ಸಂಬಂಧಿಸುವುದಲ್ಲ. ಅದು ಮಾನವನ ಮನಸ್ಸಿನಲ್ಲಿ ಅಡಗಿದೆ. ಆತನ ಕೈಯಲ್ಲಿರುವ ಆಯುಧದಲ್ಲಿ ಕಾಣುವುದಿಲ್ಲ. ಕತ್ತಿಯನ್ನು ಹಣ್ಣು ಕತ್ತರಿಸಲು ಉಪಯೋಗಿಸಬಹುದು, ಒಬ್ಬನನ್ನು ತಿವಿದುಕೊಲ್ಲಲೂ ಉಪಯೋಗಿಸಬಹುದು. ಉದ್ದೇಶ ಆಯುಧದಲ್ಲಿಲ್ಲ. ಉಪಯೋಗಿಸುವವರಲ್ಲಿ ಇರುತ್ತದೆ.

ತಮ್ಮ ರಕ್ಷಣೆ ಮಾಡಿಕೊಳ್ಳಲು ಮಾನವರು ಹಿಂಸೆಗೆ ಕೈ ಇಡುತ್ತಾರೆ. ಆದರೆ ರಕ್ಷಣೆಯು ಹಿಂಸೆಯ ಮೇಲೆ ಹೊಂದಿಕೊಂಡಿರಲು ಸಾಧ್ಯವಿಲ್ಲ. ಅದು ದೇವರ ಮೇಲೆ ಆಧಾರ ಹೊಂದಿರಬೇಕು. ಏಕೆಂದರೆ ದೇವರು ಎಲ್ಲಾ ಶಕ್ತಿಯ ಮೂಲ. ಹಾಗಾದರೆ ಮಾತ್ರ ಯಾವ ಕೇಡಿನ ಭಯವೂ ಇರುವುದಿಲ್ಲ.

ಭಯ, ನಿಶಕ್ತಿ, ಮತ್ತು ಅಜ್ಞಾನಗಳಿಂದ ಹಿಂಸೆ ಉತ್ಪನ್ನವಾಗುತ್ತದೆ. ಇವುಗಳನ್ನು ತಡೆಗಟ್ಟಲು ಭಯದಿಂದ ಮುಕ್ತನಾಗಬೇಕು. ಇದನ್ನು ಸಾಧಿಸಲು ಜೀವನದ ಬಗೆಗೆ ವಿಶಿಷ್ಟವಾದ ಅರಿವು ಬೇಕು, ಮನಸ್ಸು ಮಾರ್ಪಡಬೇಕು. ಸತ್ಯದ ಮೇಲೆ ಭರವಸೆ ಇಟ್ಟಲ್ಲಿ, ಮೂಡನಂಬಿಕೆಯನ್ನು ಬಿಟ್ಟು ವಿಚಾರ ಮಾಡಿದಲ್ಲಿ ಹಿಂಸೆ ಎನ್ನುವುದು ತಗ್ಗುತ್ತದೆ. 

ಯೋಗಿಯ ದೃಷ್ಟಿಯಲ್ಲಿ ಎಲ್ಲಾ ಪ್ರಾಣಿಗಳಿಗೂ ಜೀವಿಸಲು ಸಮಾನ ಹಕ್ಕಿದೆ. ತಾನು ಹುಟ್ಟಿರುವುದೇ ಇತರರ ಉಪಕಾರಕ್ಕೆ ಎಂಬುದು ಯೋಗಿಯ ನಂಬಿಕೆ. ಆತನು ಎಲ್ಲರನ್ನು ಪ್ರೇಮದ ದೃಷ್ಟಿಯಿಂದ ನೋಡುತ್ತಾನೆ. ಇತರರ ಸುಖ ಸಂತೋಷಗಳನ್ನೇ ತನ್ನ ಮುಂದೆ ಇಟ್ಟು ಕೊಂಡಿರುವ ಯೋಗಿಯು ಇತರರಿಗೆ ಆಶಾ ಕಿರಣನಾಗಿರುತ್ತಾನೆ. ಪೋಷಕರು ಮಕ್ಕಳಿಗೆ ಹೆಜ್ಜೆಗಳನ್ನು ಇಡಲು ಕಳಿಸುವಂತೆ ಯೋಗಿಯು ನತದೃಷ್ಟರಾದವರಿಗೆ ಉತ್ತೇಜಕವನ್ನು ಬದುಕಲು ಸಹಾಯ ಮಾಡುತ್ತಾನೆ.

ಇತರರ ತಪ್ಪು ಮಾಡಿದ್ದರೆ ದಂಡಿಸಬೇಕೆಂದು ಹೇಳುತ್ತಾರೆ, ಅವರೇ ತಪ್ಪು ಮಾಡಿದ್ದರೆ ದಯ ತೋರಬೇಕೇನ್ನುತ್ತಾರೆ. ಆದರೆ ಯೋಗಿಯಾದವನು ತನ್ನಿಂದ ತಪ್ಪು ನಡೆದಿದ್ದರೆ ತನಗೆ ದಂಡನೆ ಬೇಕೆಂದು, ಇತರರಿಂದ ತಪ್ಪು ನಡೆದಿದ್ದರೆ ಕ್ಷಮೆ ತೋರಬೇಕೆಂದು ಹೇಳುತ್ತಾನೆ. ಇತರರು ಹೇಗೆ ಜೀವನ ಮಾಡಬೇಕೆಂದು ತಾನು ಅರಿವಿನಿಂದ ತಿಳಿಯುತ್ತಾನೆ. ಯಾವಾಗಲೂ ತಾನು ಪರಿಪೂರ್ಣನಾಗಲು ಪ್ರಯತ್ನಿಸುತ್ತಾನೆ. ತಾನು ಪ್ರೇಮದಿಂದ ಕರುಣೆಯಿಂದ ನಡೆದು, ಇತರರು ಹೇಗೆ ಜೀವಿಸಬೇಕೆಂಬುದು ಕಲಿಸುತ್ತಾನೆ.

ಯೋಗಿಯು ತಪ್ಪು ಮಾಡುವವನಲ್ಲಿರುವ ತಪ್ಪನ್ನು ಮಾತ್ರ ಎದುರಿಸುತ್ತಾನೆ. ತಪ್ಪು ಮಾಡುವವನಲ್ಲ. ತಪ್ಪಿಗೆ ಪ್ರಯಾಶ್ಚಿತವನಲ್ಲದೆ ದಂಡನೆಯನ್ನು ವಿಧಿಸುತ್ತಾನೆ. ತಪ್ಪಿಗೆ ವಿರೋಧ, ತಪ್ಪಿತಸ್ಥನಿಗೆ ಪ್ರೇಮ – ಇವು ಒಂದರ ಪಕ್ಕದಲ್ಲಿ ಒಂದು ನಿಲ್ಲಬಹುದು. ಕುಡುಕನ ಹೆಂಡತಿ ಕುಡಿತವನ್ನು ವಿರೋಧಿಸುವಂತೆಯೇ ಗಂಡನನ್ನು ಪ್ರೇಮಿಸಲೂಬಹುದು. ಪ್ರೇಮವಿಲ್ಲದ ವಿರೋಧವು ಹಿಂಸೆಗೆ ಎಡೆಮಾಡುತ್ತದೆ. ಒಬ್ಬನಲ್ಲಿರುವ ತಪ್ಪನ್ನು ವಿರೋಧಿಸದೆ ಅವನನ್ನು ಮಾತ್ರ ಪ್ರೇಮದಿಂದ ಕಂಡರೆ ಅದು ತಪ್ಪಾಗುತ್ತದೆ. ಕೆಡುಕಿಗೆ ದಾರಿ ಮಾಡಿಕೊಡುತ್ತದೆ. ಆದರೆ ಯೋಗಿಯು ತಪ್ಪನ್ನು ಎದುರಿಸಿ ತಪ್ಪಿ ತಸ್ಥನನ್ನು ಪ್ರೇಮದಿಂದ ಕಾಣುವುದೇ ಒಳ್ಳೆಯ ಮಾರ್ಗ ಎಂದು ಬಗೆಯುತ್ತಾನೆ. ಪ್ರೇಮದಿಂದ ಹೋರಾಡುವುದರಿಂದ ದೇಶ ಗೆಲ್ಲಲ್ಪಡುತ್ತದೆ. ಹೀಗೆ ತಾಯಿ ಮಗುವನ್ನು ಪ್ರೀತಿಸಿದರು ದುಶ್ಚಟಗಳನ್ನು ಅವನಲ್ಲಿ ಕಂಡಾಗ ದಂಡಿಸುವಂತೆ ಅಹಿಂಸೆಯನ್ನು ನಿಜವಾಗಿ ಪಾಲಿಸುವವನು ತನ್ನ ಶತ್ರುವನ್ನು ಪ್ರೇಮದಿಂದಲೇ ಕಾಣುತ್ತಾನೆ.

ಅಹಿಂಸೆಯೊಡನೆ ಅಭಯ ಮತ್ತು ಆಕ್ರೋಶವು ಇರುತ್ತದೆ. ಭಯದಿಂದ ಮುಕ್ತಿ ದೊರೆಯಬೇಕಾದರೆ ಶುದ್ಧ ಜೀವನ ನಡೆಸಬೇಕು. ಯೋಗಿಯೂ ಯಾರಿಗೂ ಭಯಪಡುವುದಿಲ್ಲ. ಆತನನ್ನು ಕಂಡರೆ ಯಾರಿಗೂ ಭಯದ ಅವಶ್ಯಕತೆ ಇಲ್ಲ. ಏಕೆಂದರೆ ತಾನು ಆತ್ಮ ಸಾಧನೆಯಿಂದ ಶುದ್ದನಾಗಿರುತ್ತಾನೆ.

ಆಕ್ರೋಧ ಎರಡು ಬಗೆಯಲ್ಲಿರುತ್ತದೆ. ಒಂದು ಮನಸ್ಸನ್ನು ಹೀನ ಸ್ಥಿತಿಗೆ ತಂದರೆ, ಮತ್ತೊಂದು ಆಧ್ಯಾತ್ಮದ ಬೆಳವಣಿಗೆಗೆ ಎಡೆ ಮಾಡಿಕೊಡುತ್ತದೆ. ಮೊದಲನೆಯದರ ಮೂಲವೂ ದರ್ಪದಲ್ಲಿ ನೆಲೆಸಿರುವುದರಿಂದ ಅಂಥವುಗಳನ್ನ ತೆಗಳಿದರೆ ಕ್ರೋಧದಲ್ಲಿ ಪರ್ಯಾವ ಸ್ಥಾನ ಹೊಂದಿರುತ್ತದೆ. ಇದು ಮನಸ್ಸನ್ನು ವಸ್ತುಗಳ ನಿಜವಾದ ದೃಷ್ಟಿಯಿಂದ ನೋಡುವುದಕ್ಕೆ ಬಿಡುವುದಿಲ್ಲ, ಮತ್ತು ಅಂಥವನ ಮೌಲ್ಯ ನಿರ್ಧಾರದಲ್ಲಿಯೂ ಕುಂದುಗಳನ್ನು ತಂದೊಡ್ಡುತ್ತದೆ. ಆದರೆ ಯೋಗಿಯಾದವನು ತನ್ನ ಮನಸ್ಸು ಅವ್ಯಸ್ಥಿತವಾದರೆ ತನ್ನಲಿ ತಾನೇ ದುಗುಡಗೊಳ್ಳುತ್ತಾನೆ, ಮತ್ತು ತನ್ನ ಅಭ್ಯಾಸ ಅನುಭವಗಳು ತಪ್ಪನ್ನು ಮಾಡದಂತೆ ತಡೆಯುತ್ತಾನೆ. ತನ್ನ ತಪ್ಪಿನ ವಿಚಾರದಲ್ಲಿ ತಾನು ತೀಕ್ಷ್ಣನಾಗಿದ್ದು, ಪರರ ತಪ್ಪಿನ ವಿಚಾರದಲ್ಲಿ ಮೃದುವಾಗಿರುತ್ತಾನೆ. ಮನಸ್ಸಿನ ಮೃದುತ್ವವೇ ಯೋಗಿಯ ಲಕ್ಷಣ.

ಸತ್ಯ  –  ನೀತಿಯ ಅಥವಾ ನಡತೆಯ ಅತಿ ಉನ್ನತ ನಿಬಂಧನೆ ಎಂದರೆ ಸತ್ಯ. ಮಹಾತ್ಮ ಗಾಂಧೀಜಿಯವರು ಹೀಗೆ ಹೇಳುತ್ತಾರೆ : “ಸತ್ಯ ಎಂದರೆ ದೇವರು, ದೇವರು ಎಂದರೆ ಸತ್ಯ.”  ಬೆಂಕಿ ಹೇಗೆ ಕೊಳಕನ್ನು ಸುಟ್ಟು ಬಂಗಾರವನ್ನು ಶುದ್ಧಗೊಳಿಸುತ್ತದೋ ಹಾಗೆ ಸತ್ಯವೆನ್ನುವ ಬೆಂಕಿಯು ಯೋಗಿಯನ್ನು ಶುದ್ಧಗೊಳಿಸಿ ಆತನಲ್ಲಿರುವ ಕಲ್ಮಶಗಳು ಸುಡುತ್ತವೆ.

ಮಾನವನ ಮನಸ್ಸು ಸತ್ಯವಾದ ಯೋಚನೆಗಳನ್ನು ಮಾಡಿದರೆ, ನಾಲಗೆ ಸತ್ಯವಾದ ವಾಕ್ಕುಗಳನ್ನು ನುಡಿದರೆ ಮತ್ತು ಜೀವನವು ಸತ್ಯದ ಮೇಲೆ ಆಧಾರಗೊಂಡಿದ್ದರೆ. ಅಂಥ ವ್ಯಕ್ತಿಯು ಅನಂತ ಪರಮಾತ್ಮನೊಡನೆ ಸಮಾಗಮ ಹೊಂದಲು ಯೋಗ್ಯನಾಗುತ್ತಾನೆ. ಸತ್ ತತ್ವವು ಮೂಲತಃ ಪ್ರೇಮಮಯ ಮತ್ತು ಸತ್ಯಮಯವಾದುದು, ಮತ್ತು ಈ ರೂಪಗಳಲ್ಲಿ ಪ್ರಕಟಗೊಳ್ಳುವುದು ಯೋಗಿಯ ಜೀವನವು ತತ್ವದ ರೂಪಗಳೊಡನೆ ಹೊಂದಿಕೊಂಡಿರಬೇಕು. ಆದ್ದರಿಂದ ಪ್ರೇಮದ ಮೇಲೆಯೇ ನೆಲೆಗೊಂಡಿರುವ ಹಿಂಸೆ ಎನ್ನುವುದನ್ನ ವಿಧಿಸಿರುವುದು. ಸತ್ಯವೆನ್ನುವುದು ಆಲೋಚನೆಗಳಲ್ಲಿ, ಮಾತುಗಳಲ್ಲಿ ಮತ್ತು ಕರ್ಮಗಳಲ್ಲಿ ಪೂರ್ಣವಾಗಿಯೇ ಇರಬೇಕೆ ಎನ್ನುವುದನ್ನು ಗ್ರಹಿತವಾಗಿಯೇ ಇಟ್ಟುಕೊಳ್ಳುತ್ತದೆ. ಅಸತ್ಯವೆನ್ನುವುದು ಯಾವ ರೀತಿಯಲ್ಲಿದ್ದರೂ ಸಾಧಕನನ್ನು ಅಸ್ತವ್ಯಸ್ತಗೊಳಿಸುತ್ತದೆ.

ಸತ್ಯವೆನ್ನುವುದು ಬರಿಯ ಮಾತಿಗೆ ಮಾತ್ರ ಸೀಮಿತವಾಗಿಲ್ಲ. ಮಾತಿಗೆ ಸಂಬಂಧಪಟ್ಟಂತೆ ನಾಲ್ಕು ವಿಧದ ಪಾಪಗಳಿರುತ್ತದೆ. – ಬಯ್ಯುವುದು, ಹೇಯಕರವಾಗಿ ಮಾತನಾಡುವುದು,

ಅಸತ್ಯ ವ್ಯವಹಾರ, ಸುಳ್ಳು ಆರೋಪಗಳನ್ನು ಮಾಡುವುದು ಮತ್ತು ಬೇರೆಯವರು ಯಾವುದನ್ನು ಪವಿತ್ರವೆಂದು ಭಾವಿಸುವರೋ ಅದನ್ನು ತೆಗಳುವುದು. ಸುಳ್ಳು ಆರೋಪಗಾರನು ಸರ್ಪಕ್ಕಿಂತಲೂ ವಿಷವುಳ್ಳವನು. ಮಾತನ್ನು ನಿಗ್ರಹ ಮಾಡುವುದರಿಂದ ದ್ವೇಷ ನಿರ್ಮೂಲವಾಗುತ್ತದೆ. ಯಾವಾಗ ಮನಸ್ಸು ಯಾರ ವಿಚಾರದಲ್ಲೂ ದ್ವೇಷ ಮಾಡುವುದಿಲ್ಲವೋ ಆಗ ಎಲ್ಲರ ವಿಚಾರದಲ್ಲೂ ಮನಸ್ಸು ಉದಾರವಾಗಿರುತ್ತದೆ. ಯಾರ ನಾಲಿಗೆ ನಿಗ್ರಹಿಸಲ್ಪಟ್ಟಿದೆಯೋ ಅಂಥವನು ಹೆಚ್ಚಿನ ಮಟ್ಟಿಗೆ ಆತ್ಮ ನಿಗ್ರಹ ಮಾಡಿಕೊಂಡಂತೆಯೇ. ಅಂಥವನ ಮಾತನ್ನು ಎಲ್ಲರೂ ಗೌರವದಿಂದ ಸ್ವೀಕರಿಸುತ್ತಾರೆ ಮತ್ತು ಆತನ ಮಾತನ್ನು ನೆನಪು ಮಾಡಿಕೊಳ್ಳುತ್ತಾರೆ. ಏಕೆಂದರೆ ಎಲ್ಲರಿಗೂ ಅದು ಒಳ್ಳೆಯದಾಗಿರುತ್ತದೆಯಲ್ಲದೆ ಅದು ಸತ್ಯದಿಂದಲೂ ತುಂಬಿರುತ್ತದೆ.

ಸತ್ಯದಲ್ಲಿ ಪ್ರತಿಷ್ಠಿತನಾದವನು ಯಾವುದು ತನಗೆ ಬೇಕೆಂದು ಶುದ್ಧ ಹೃದಯದಿಂದ ಆಶಿಸುತ್ತಾನೋ ಅದು ಆತನಿಗೆ ತಾನಾಗಿಯೇ ಬರುತ್ತದೆ. ಅದರ ಹಿಂದೆ ಆತನು ಹಿಂಬಾಲಿಸಿ ಅರಸಿ, ಹೋಗಬೇಕಾಗಿಲ್ಲ. ಅಂತವನ ಕರ್ಮಗಳಿಗೆ ಫಲ ತಾನೇ ತಾನಾಗಿ ಬರುತ್ತದೆ. ಅವನು ಅದಕ್ಕೆ ಬೇರೆ ಪ್ರಯತ್ನ ಮಾಡಬೇಕಾಗಿಲ್ಲ. ಸತ್ಯದ ಮೂಲವಾದ ದೇವರು ಆತನಿಗೆ ಬೇಕಾದುದನ್ನೆಲ್ಲ ನೀಡುತ್ತಾನೆ.

ಅಸ್ತೇಯ – ಇತರ ವಸ್ತುಗಳನ್ನ ಇಚ್ಚಿಸಿ ಅದನ್ನು ತಾನು ಹೊಂದಬೇಕೆಂದು ಹವಣಿಸುವುದು, ಆಸೆಪಡುವುದು ಎಲ್ಲವೂ ಹುಟ್ಟುತ್ತದೆ. ಅಸ್ತೇಯ ಎಂದರೆ ಕಳ್ಳತನ ಮಾಡದಿರುವುದು. ಇದು ಇತರರಿಗೆ ಸೇರಿದ್ದನ್ನು ಕಸಿದುಕೊಳ್ಳುವುದೊಂದೇ ಅಲ್ಲದೇ, ವಸ್ತುಗಳು ಯಾವುದಕ್ಕೆ ನಿಯೋಜಿತವಾಗಿರುತ್ತವೋ ಅವುಗಳಿಂದ ಭಿನ್ನವಾದ ಉದ್ದೇಶಕ್ಕೆ ಬಳಸುವುದಕ್ಕೂ ಅಥವಾ ಹೆಚ್ಚಿನ ಕಾಲ ಬಳಸುವುದಕ್ಕೂ ಅನ್ವಯವಾಗುತ್ತದೆ. ಎಂದರೆ ದುರುಪಯೋಗ, ವಿಶ್ವಾಸ ದ್ರೋಹ, ದುರ್ವ್ಯವಹಾರ ಮುಂತಾದವೆಲ್ಲ ಕಳ್ಳತನದಲ್ಲಿ ಸೇರಿಸಿಕೊಳ್ಳುತ್ತದೆ. ಯೋಗಿಯಾದವನು ತನ್ನ ಭೌತಿಕ ವಸ್ತುಗಳನ್ನು ಅತಿ ಅಲ್ಪ ಪ್ರಮಾಣಕ್ಕೆ ತರುತ್ತದೆ. ಏಕೆಂದರೆ ಬೇಕಾಗಿದ್ದಕ್ಕಿಂತ ಹೆಚ್ಚಿನ ವಸ್ತುಗಳು ಸಂಗ್ರಹ ಆತನ ದೃಷ್ಟಿಯಲ್ಲಿ ಕಳ್ಳತನವೇ ಆಗುತ್ತದೆ. ಆ ಮಟ್ಟಿಗೆ ಆತನು ಕಳ್ಳನಂತೆ ಆಗುತ್ತಾನೆ. ಇತರರು ಹೆಚ್ಚಿನ ಐಶ್ವರ್ಯ, ಶಕ್ತಿ, ಹೆಸರು ಈ ಸೌಲಭ್ಯಗಳಿಗಾಗಿ ಹವಣಿಸಿದರೆ ಯೋಗಿಯಾದವನು ದೇವರನ್ನು ಮಾತ್ರ ಕೋರುತ್ತಾನೆ. ಆಸೆ ಬುರುಕತನದಿಂದ ಸ್ವಾತಂತ್ರ್ಯಗಳಿಸಿದರೆ ಮಹತ್ತರವಾದ ಆಶೆಗಳು ತಡೆಯಲ್ಪಡುತ್ತವೆ. ಶಾಂತಿಯ ಪ್ರವಾಹದಲ್ಲಿ ಆಸೆಯಿಂದ ಅಲ್ಲೋಲ ಕಲ್ಲೋಲಗಳಾಗುತ್ತದೆ. “ನೀನು ಕದಿಯಬೇಡ” ಎಂಬ ಧರ್ಮಸೂತ್ರ ಎಲ್ಲಾ ಐಶ್ವರ್ಯಗಳಿಗೂ ಆಗರವಾಗುತ್ತದೆ.

ಬ್ರಹ್ಮಚರ್ಯ :- ಅರ್ಥಕೋಶದ ಪ್ರಕಾರ “ಬ್ರಹ್ಮಚರ್ಯ”ವೆಂದರೆ ಇಂದ್ರಿಯ ನಿಗ್ರಹ, ಧಾರ್ಮಿಕ ಅಧ್ಯಯನ, ಆತ್ಮ ನಿಗ್ರಹ ಮುಂತಾದವು. ವೀರ್ಯ ಹಾನಿಯು ಮೃತ್ಯುವಿಗೂ, ವೀರ್ಯ ಸಂಗ್ರಹ ಜೀವನ ಸ್ಥಿರತೆಗೂ ಮಾರ್ಗವಾಗುವುದೆಂದು ಹೇಳುತ್ತಾರೆ. ವೀರ್ಯ ಸಂಗ್ರಹದಿಂದ ಯೋಗಿಯ ದೇಹವು ಸುಗಂಧಯುಕ್ತವಾಗುತ್ತದೆ. ಆದ್ದರಿಂದ ಸತತ ಮಾನಸಿಕ ಸಾಧನೆಯಿಂದ ವೀರ್ಯ ಸಂಗ್ರಹ ಬೇಕೆನ್ನುವ ವಿಧಿ. ಶಂಕರಾಚಾರ್ಯರ ಅಭಿಪ್ರಾಯದಲ್ಲಿ ಬ್ರಹ್ಮಚಾರಿಯೆಂದರೆ ವೈದಿಕ ಗ್ರಂಥಗಳ ಅಧ್ಯಯನದಲ್ಲಿ ತೊಡಗಿರುವವನು, ಬ್ರಹ್ಮವಸ್ತುವಿನ ಆಧಾರದ ಮೇಲೆ ನಡೆಯುವವನು, ಎಲ್ಲವೂ ಬ್ರಹ್ಮದಲ್ಲೇ ನೆಲೆಸಿವೆ ಎನ್ನುವ ಭಾವನೆಯುಳ್ಳವನು. ಎಂದರೆ, ಎಲ್ಲದರಲ್ಲೂ ದೇವರನ್ನು ಕಾಣುವವನೇ ಬ್ರಹ್ಮಚಾರಿ. ಆದರೆ ಪತಂಜಲಿಯು ದೈಹಿಕ, ವಾಕ್ಕಿನ ಮತ್ತು ಮಾನಸಿಕ ಸಂಯೋಗ ಸಂಯಮವೇ ಬ್ರಹ್ಮಚರ್ಯ ಎಂದು ಹೇಳುತ್ತಾರೆ. ಹೀಗೆಂದ ಮಾತ್ರಕ್ಕೆ ಯೋಗದರ್ಶನವೆಲ್ಲ ಸಂಯಮಗಳಿಗೆ ಮಾತ್ರವೇ ಎಂದಾಗುವುದಿಲ್ಲ. ಬ್ರಹ್ಮಚರ್ಯವೆಂದರೆ ಒಂದು ಮಾನಸಿಕ ಸ್ಥಿತಿ ಇದು ಮದುವೆಯಾಗಲಿ, ಆಗದೆ ಇರಲಿ ; ಗೃಹಸ್ಥನಾಗಲಿ ಆಗದಿರಲಿ ಅವನಿಗೆ ಮಾತ್ರ ಸೀಮಿತವಾಗಿಲ್ಲ. ಮೋಕ್ಷಕ್ಕೆ ದಾರಿ ಮದುವೆಯಾಗದಿರುವುದೊಂದೇ ಅಲ್ಲ. ಎಲ್ಲಾ ಸ್ಮೃತಿಗಳು ಮದುವೆ ಸಂಸ್ಕಾರವನ್ನು ವಿಧಿಸುತ್ತದೆ. ಮಾನವನು ಪ್ರೇಮ, ಪ್ರೀತಿಗಳ ಸವಿಯಿಲ್ಲದೆ ದೈವಿಕವಾದ ಪ್ರೇಮವನ್ನು ಅರಿಯಲು ಸಾಧ್ಯವಿಲ್ಲ. ಭಾರತದ ಪ್ರಮುಖ ಋಷಿಗಳು ಮತ್ತು ಯೋಗಿಗಳು ಮದುವೆಯಾಗಿ ಸಂಸಾರಗಳನ್ನು ಕಟ್ಟಿಕೊಂಡೇ ಇದ್ದವರು ಮತ್ತು ಅವರು ನೈತಿಕ ಮತ್ತು ಸಾಮಾಜಿಕ ನಿಯಮಗಳನ್ನು ತಪ್ಪಿಸಿಕೊಂಡವರಲ್ಲ. ಮದುವೆಯಾಗುವುದು ಮತ್ತು ಮಕ್ಕಳನ್ನು ಪಡೆಯುವುದು ದೈವಿಕ ಪ್ರೇಮದ ಅರಿವಿಗೆ, ದೈವಿಕ ಆನಂದಕ್ಕೆ ದೇವರೊಡನೆ ಸಮಾಗಮಕ್ಕೆ ಪ್ರತಿಬಂಧಕಗಳಲ್ಲ.

ದೈವಾನುಗ್ರಹಕ್ಕೆ ಹವಣಿಸುವ ಗ್ರಹಸ್ಥನ ವಿಚಾರವಾಗಿ ಶಿವ ಸಂಹಿತೆಯು ಈ ರೀತಿ ಹೇಳುತ್ತದೆ :– ನಿರ್ಜನವಾದ ಪ್ರದೇಶದಲ್ಲಿದ್ದು ಆತನು ಸಾಧನೆಗೈಯಲಿ, ತೋರಿಕೆಗೆ ಆತನು ಸಮಾಜದಲ್ಲಿರಬೇಕು, ಆದರೆ ಆತನ ಹೃದಯ ಮಾತ್ರ ಅಲ್ಲಿ ಸಿಕ್ಕಿರಬಾರದು. ತನ್ನ ಹುದ್ದೆ ಇಲ್ಲ ಜಾತಿಯ ಅಂತಸ್ತಿನ ಕರ್ತವ್ಯಗಳನ್ನು ಆತನು ಬಿಡಬಾರದು. ಫಲಾಪೇಕ್ಷೆಯಿಲ್ಲದೆ ದೇವರ ಸೇವೆ ಎಂದು ಇವುಗಳನ್ನು ಮಾಡಲಿ. ಈ ಯೋಗದ ಹಾದಿಯಲ್ಲಿ ನಡೆದರೆ ಸಂಶಯವಿಲ್ಲದೆ ಆತನಿಗೆ ಜಯವಾಗುತ್ತದೆ. ಈ ಯೋಗದಲ್ಲಿ ನಿರತನಾದವನನ್ನು ಧರ್ಮ-ಅಧರ್ಮಗಳು ಮುಟ್ಟುವುದಿಲ್ಲ. ಜನರಕ್ಷಣೆಗಾಗಿ ಆತನು ಏನಾದರೂ ಪಾಪಕಾರ್ಯವೆಸಗಿದರು ಆದ್ದರಿಂದ ಆತನು ಕೆಡುವುದಿಲ್ಲ. (ಶಿವ ಸಂಹಿತೆ ೫-೨೩೪ ರಿಂದ೨೩೮)

ಬ್ರಹ್ಮಚರ್ಯದಲ್ಲಿ ನಿರತರಾದವನು  ವೀರ್ಯವನ್ನು ಶಕ್ತಿಯನ್ನು ಧೈರ್ಯಮನಸ್ಸನ್ನೂ ಶಕ್ತಿಯುತವಾದ ಬುದ್ದಿಯನ್ನು ಬಳಸಿಕೊಂಡು ಎಂಥ ಧರ್ಮವನ್ನಾದರೂ ಎದುರಿಸಲು ಸಮರ್ಥನಾಗುತ್ತಾನೆ. ಬ್ರಹ್ಮಚಾರಿಯೂ ತಾನುಗಳಿಸಿದ ಶಕ್ತಿಯನ್ನು ವಿವೇಕದಿಂದ ಉಪಯೋಗಿಸುತ್ತಾನೆ.  ದೈಹಿಕ ಸಾಮರ್ಥ್ಯವನ್ನು ದೇವರ ಸೇವೆಗಾಗಿ ಬಳಸುತ್ತಾನೆ, ಮನಸ್ಸಿನ ಶಕ್ತಿಯನ್ನು ಸಾಂಸ್ಕೃತಿಯ ಸೇವೆಗಾಗಿ ಬಳಸುತ್ತಾನೆ. ಬುದ್ಧಿಯ ಚೈತನ್ಯವನ್ನು ಆಧ್ಯಾತ್ಮಿಕ ಜೀವನದ ಬೆಳವಣಿಗೆಗೆ ಉಪಯೋಗಿಸುತ್ತಾನೆ. ಬ್ರಹ್ಮಚರ್ಯೆ ಎಂದರೆ ವಿವೇಕದ ಜ್ವಾಲೆಯನ್ನು ಹೊತ್ತಿಸಬಹುದಾದ ಬೆಂಕಿ.

ಅಪರಿಗ್ರಹ :- ಪರಿಗ್ರಹ ಎಂದರೆ ಸಂಗ್ರಹ ಮಾಡುವುದು. ಇದರಿಂದ ಮುಕ್ತವಾಗುವುದು ಅಪರಿಗ್ರಹ. ಅಸ್ತೇಯದ ಮತ್ತೊಂದು ರೂಪವೇ ಅಪರಿಗ್ರಹ ಬೇಡದಿರುವುದನ್ನು ಹೇಗೆ ನಾವು ತೆಗೆದುಕೊಳ್ಳಬಾರದೋ ಹಾಗೆಯೇ ಆ ಕಾಲಕ್ಕೆ ಬೇಡದಿರುವ ವಸ್ತುಗಳನ್ನು ಸಂಗ್ರಹ ಮಾಡಲು ಬಾರದು ಅಲ್ಲದೆ ಪ್ರಯತ್ನ ಪಡೆದೆ ಯಾವ ವಸ್ತುವನ್ನುಗಳಿಸಬಾರದು ಅಥವಾ ಬಹುಮಾನವಾಗಿ ಸ್ವೀಕರಿಸಬಾರದು. ಏಕೆಂದರೆ ಇದು ಆತ್ಮದ ಕೃಪಾನತ್ವವನ್ನು ಸೂಚಿಸುತ್ತದೆ. ತನ್ನ ಮುಂದಿನ ಉಪಯೋಗಕ್ಕೆ ಎಂದು ಸಂಗ್ರಹಿಸುವ ಮನೋಭಾವದ ಹಿನ್ನೆಲೆಯಾಗಿ ದೇವರು ತನ್ನನ್ನು ಕಾಲಕಾಲಕ್ಕೆ ಕಾಪಾಡಲಾರನೆಂಬ ದುರ್ಭಾವನೆ ತುಂಬಿರುತ್ತದೆ.

ಅಪರಿಗ್ರಹದ ಆಚರಣೆಯಿಂದ ಯೋಗಿಯು ತನ್ನ ಜೀವನವನ್ನು ಸರಳಗೊಳಿಸುತ್ತಾನೆ ಮತ್ತು ಅಭಾವದ ಯೋಚನೆ ಮಾಡದಂತೆ ಮನಸ್ಸನ್ನು ತರಬೇತು ಮಾಡುತ್ತಾನೆ. ಆಗ ಆತನಿಗೆ ಅಗತ್ಯವಾಗಿ ಏನೋ ಬೇಕೋ ಅದು ಸಕಾಲದಲ್ಲಿ ಆತನಡೆಗೆ ಬರುತ್ತದೆ. ಸಾಮಾನ್ಯ ಮನುಷ್ಯ ಜೀವನ ಯಾವಾಗಲೂ ತೊಂದರೆಗಳಿಂದ ನಿರಾಶೆಗಳಿಂದ ತುಂಬಿದ್ದು ಅದಕ್ಕೆ ಸರಿಯಾದ ಪ್ರಕ್ರಿಯೆಗಳಿಂದ ತುಂಬಿರುತ್ತದೆ. ಆ ರೀತಿಯಲ್ಲಿ ಮನಸ್ಸು ಒಂದು ಸಮಸ್ಥಿತಿಯಲ್ಲೇ ಇಟ್ಟಿರಲು ಅಸಾಧ್ಯವಾಗಿಯೇ ಇರುತ್ತದೆ. ಆದರೆ ಸಾಧಕನಾದವನು ತನಗೆ ಏನೇ ಆಗಲಿ ಒಂದೇ ಸ್ಥಿತಿಯಲ್ಲಿರುವ ಶಕ್ತಿಯನ್ನುಗಳಿಸಿರುತ್ತಾನೆ. ಈ ರೀತಿಯಲ್ಲಿ ಆತನು ಈ ಪ್ರಪಂಚದಲ್ಲಿ ತುಂಬಿರುವ ಬ್ರಾಂತಿ ಮತ್ತು ದುಃಖಗಳಿಂದ ನಿರ್ಲಿಪ್ತವಾಗಿರಲು ಬೇಕಾದ ಶಾಂತಿಯನ್ನು ಉಳಿಸಿಕೊಳ್ಳಲು ಶಕ್ತನಾಗಿರುತ್ತಾನೆ. ಶ್ರೀ ಕೃಷ್ಣನು ಅರ್ಜುನನಿಗಿತ್ತ ಮಾತನ್ನು ಆತನು ನೆನೆಸಿಕೊಳ್ಳುತ್ತಾನೆ.

 ಅನನ್ಯಾಃ ಚಿಂತಯಂತೋ ಮಾಂ ಜನಾಃ ಪರ್ಯುಪಾಸತೇ |

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

                                                                        __ಭ.ಗೀ. ೯-೨೨

“ಯಾರು ತದೇಕಚಿತ್ತದಿಂದ ನನ್ನನ್ನು ಆರಾಧಿಸುತ್ತಾರೆಯೋ, ಯಾರು ನನ್ನ ಸ್ಥಿತಿಯೊಂದಿಗೆ ಸಾಮ್ಯವನ್ನು ಹೊಂದಲು ಬಯಸುತ್ತಾರೆಯೋ ಅಂಥವರಿಗೆ ನಾನು ಭರವಸೆ ಮತ್ತು ಆಧಾರಗಳನ್ನು ನೀಡುತ್ತೇನೆ. ಅವರಿಗೆ ಬೇಕಾದುದನೆಲ್ಲವನ್ನೂ ನಾನೇ ಒದಗಿಸುತ್ತೇನೆ ಮತ್ತು ಯಾವಾಗಲೂ ಅವರನ್ನು ರಕ್ಷಿಸುತ್ತೇನೆ.”