ಯಲಬುರ್ಗಾ (ಕೊಪ್ಪಳ ಜಿಲ್ಲೆ): ಸಚಿವ ಅಶ್ವತ್ಥನಾರಾಯಣ ಈಗ ಅಸ್ವಸ್ಥ ನಾರಾಯಣ ಆಗಿದ್ದು, ಮಾನಸಿಕ ಕಾಯಿಲೆ ಇರಬೇಕು. ಇವರು ರಾಜಕಾರಣದಲ್ಲಿ ಇರಲು ಲಾಯಕ್ಕಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಯಲಬುರ್ಗಾದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಕಿಡಿಕಾರಿದ್ದು, ಇಂಥವರನ್ನು ಸೋಲಿಸಿ ಮನೆಗೆ ಕಳುಹಿಸಬೇಕು ಎಂದು ಹೇಳಿದ್ದಾರೆ.
ರೈತರು, ದಲಿತರು, ಅಲ್ಪಸಂಖ್ಯಾತರು, ಬಡವರ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಇನ್ನೊಬ್ಬರನ್ನು ಹೊಡೆದು ಹಾಕುವ ಬಗ್ಗೆ ಬಿಜೆಪಿ ಮಾತನಾಡುತ್ತಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಕೆಲಸ ಕೇಳಬೇಡಿ. ಲವ್ ಜಿಹಾದ್ ಬಗ್ಗೆ ಮಾತನಾಡಿ ಎನ್ನುತ್ತಾರೆ. ಇಂಥವರ ಸರ್ಕಾರ ಅಧಿಕಾರದಲ್ಲಿ ಇರಬೇಕಾ ಎಂದು ಪ್ರಶ್ನಿಸಿದರು.
ಜನ ಭಾವೈಕ್ಯದಿಂದ ಇರುವುದು ಬಿಜೆಪಿಗೆ ಬೇಕಾಗಿಲ್ಲ. ಜನರ ನಡುವೆ ದ್ವೇಷ ಬಿತ್ತುವುದರಿಂದ ಚುನಾವಣೆಯಲ್ಲಿ ಮತಗಳು ಸಿಗುತ್ತವೆ ಎನ್ನುವ ಭ್ರಮೆಯಲ್ಲಿ ಬಿಜೆಪಿ ಇದೆ. ರಾಜಕಾರಣ ಇನ್ನೊಬ್ಬರ ಮೇಲೆ ಸೇಡು ತೀರಿಸಿಕೊಳ್ಳಲು ಇಲ್ಲ. ಸ್ವಾರ್ಥ ಸಾಧನೆಗೂ ಅಲ್ಲ. ಸಮಾಜಸೇವೆಯೇ ರಾಜಕಾರಣದ ಮೂಲ ಉದ್ದೇಶವಾಗಿದ್ದು, ಬಿಜೆಪಿ ಮೂಲ ತತ್ವವನ್ನೇ ಮರೆತು ರಾಜ್ಯದ ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಅತಿ ಹೆಚ್ಚು ಕೆಲಸ ಮಾಡಿದವರ ಪೈಕಿ ಬಸವರಾಜ ರಾಯರಡ್ಡಿ ಕೂಡ ಒಬ್ಬರು. ಯಲಬುರ್ಗಾ ಕ್ಷೇತ್ರದಲ್ಲಿ ಹಿಂದಿನ ಚುನಾವಣೆಯಲ್ಲಿ ಸೋತಿದ್ದು ಅಚ್ಚರಿ ತಂದಿದೆ. ಈ ಬಾರಿ ಕಾಂಗ್ರೆಸ್ ಪರ ಅಲೆ ಇದ್ದು ರಾಯರಡ್ಡಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.