ಉಲಾನ್‌ಬಾತರ್ (Ulaanbaatar)- ಇಲ್ಲಿ ನಡೆಯುತ್ತಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ರವಿ ಕುಮಾರ್ ದಹಿಯಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಆ ಮೂಲಕ ಹಿರಿಯ ಏಷ್ಯನ್ ಕುಸ್ತಿಯಲ್ಲಿ ಸತತ ಮೂರನೇ ಸ್ವರ್ಣ ಗೆದ್ದು ಇತಿಹಾಸ ಸೃಷ್ಟಿಸಿದರು. ಅಲ್ಲದೆ, ಭಾರತ ಈ ಐದು ಪದಕಗಳೊಂದಿಗೆ ಪಂದ್ಯಾವಳಿಯಲ್ಲಿ ಒಂದು ಚಿನ್ನ, ನಾಲ್ಕು ಬೆಳ್ಳಿ ಮತ್ತು 10 ಕಂಚಿನ ಪದಕಗಳು ಸೇರಿದಂತೆ ಒಟ್ಟು 15 ಪದಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
ಇನ್ನು ಸ್ಟಾರ್ ಕುಸ್ತಿಪಟುಗಳಾದ ಬಜರಂಗ್ ಮತ್ತು ಗೌರವ್ ಬಲಿಯಾನ್ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ. 70 ಕೆಜಿ ವಿಭಾಗದಲ್ಲಿ ನವೀನ್ ಮತ್ತು 97 ಕೆಜಿ ವಿಭಾಗದಲ್ಲಿ ಸತ್ಯವರ್ತ್ ಕಡಿಯನ್ ಕಂಚಿನ ಪದಕ ಗೆದ್ದುಕೊಂಡರು.
57 ಕೆಜಿ ವಿಭಾಗದ ಫೈನಲ್‌ನಲ್ಲಿ ರವಿ ಕಜಕಿಸ್ತಾನದ ಕುಸ್ತಿಪಟು ರಖತ್ ಕಲ್ಜಾನ್ ಅವರನ್ನು 12-2 ರಿಂದ ಸೋಲಿಸಿ ಭಾರತಕ್ಕೆ ಸ್ಪರ್ಧೆಯ ಮೊದಲ ಚಿನ್ನದ ಪದಕವನ್ನು ನೀಡಿದರು. ಬಜರಂಗ್ ಅವರು 65 ಕೆಜಿ ವಿಭಾಗದಲ್ಲಿ ಇರಾನ್‌ನ ರೆಹಮಾನ್ ಮೂಸಾ ವಿರುದ್ಧ 1-3 ಅಂತರದಲ್ಲಿ ಸೋತು ಬೆಳ್ಳಿ ಪಡೆದರು. 79 ಕೆಜಿ ವಿಭಾಗದ ಫೈನಲ್‌ನಲ್ಲಿ ಗೌರವ್ ಅವರನ್ನು ಇರಾನ್‌ನ ಅಲಿ ಭಕ್ತಿಯಾರ್ ಸಾವದ್ಕೊಹಿ ಸೋಲಿಸಿದರು. ನವೀನ್ 70 ಕೆಜಿ ವಿಭಾಗದಲ್ಲಿ ಮಂಗೋಲಿಯಾದ ತೆಮುಲೆನ್ ಎಂಖೆಟುಯಾ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದರು.
ಇನ್ನೂ ಸತ್ಯವರ್ತ್ ಕಡಿಯನ್ ಅವರು 97 ಕೆಜಿ ವಿಭಾಗದಲ್ಲಿ ತುರ್ಕಮೆನಿಸ್ತಾನದ ಜಿಯಾಮುಹಮ್ಮತ್ ಸಪರೋವ್ ಅವರನ್ನು 10-0 ಅಂತರದಿಂದ ಸೋಲಿಸಿ ಕಂಚು ಗೆದ್ದರು. ಪುರುಷರ ಫ್ರೀಸ್ಟೈಲ್ ವಿಭಾಗದ ಉಳಿದ ಐದು ತೂಕದ ಪಂದ್ಯಗಳು ಭಾನುವಾರ ನಡೆಯಲಿವೆ.