ಮನೆ ರಾಜ್ಯ ಹುಬ್ಬಳ್ಳಿ ಗಲಭೆ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

ಹುಬ್ಬಳ್ಳಿ ಗಲಭೆ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

0
Pic Creidt- ANI

ಹುಬ್ಬಳ್ಳಿ (Hubli)- ಇತ್ತೀಚೆಗೆ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಶನಿವಾರ) ಪಾಲಿಕೆ ಸದಸ್ಯ, ಎಐಎಂಐಎಂ ಪಕ್ಷದ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್ ಹೊನ್ಯಾಳ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಮೂಲಕ ಎಐಎಂಐಎಂ ಪಕ್ಷದಲ್ಲಿ ಗುರುತಿಸಿಕೊಂಡ 8-10 ಜನರನ್ನು ವಶಕ್ಕೆ ಪಡೆದಂತಾಗಿದೆ. ಗಲಭೆ ಬಳಿಕ ನಜೀರ್ ಹೈದರಾಬಾದ್‌ಗೆ ತೆರಳಿದ್ದರು. ಶನಿವಾರ ಅಲ್ಲಿಂದ ಹುಬ್ಬಳ್ಳಿಗೆ ಮರಳಿದ್ದರು ಎನ್ನಲಾಗಿದೆ. ನಜೀರ್ ಅಹ್ಮದ್ ಅವರನ್ನು ಅವರ ನಿವಾಸದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆತಂದು 4 ಗಂಟೆಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ವೌಲ್ವಿ ವಾಸೀಂ ಪಠಾಣ ಜತೆ ನಜೀರ್ ಅಹ್ಮದ್ ನಿಕಟ ಸಂಪರ್ಕ ಹೊಂದಿದ್ದರು. ಅಂದು ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಪ್ರಮುಖ ಪಾತ್ರ ಸಹ ನಿರ್ವಹಿಸಿದ್ದರು. ಆದರೆ ಪ್ರತಿಭಟನೆ ವಿಕೋಪಕ್ಕೆ ತಿರುಗಿದ ಬಳಿಕ ಉಲ್ಟಾ ಹೊಡೆದಿದ್ದರು. ಗಲಭೆ ವೇಳೆ ಸ್ಥಳದಲ್ಲಿದ್ದ ಕಾರಣಕ್ಕಾಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಎಐಎಂಐಎಂ ಪಕ್ಷದ ಪಾಲಿಕೆ ಸದಸ್ಯ ನಜೀರ್ ಅಹ್ಮದ್ ಹೊನ್ಯಾಳ ಜತೆ ಆ ಪಕ್ಷದ ಮೊಹಮ್ಮದ ಆಸೀಫ್‌ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಜೀರ್ ಕಳೆದ 2 ವರ್ಷದ ಹಿಂದೆಯಷ್ಟೇ ಎಐಎಂಐಎಂ ಪಕ್ಷ ಸೇರಿದ್ದರು. ಈ ಮೊದಲು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಕಳೆದ ಬಾರಿ ಪಾಲಿಕೆಯ ನಾಮ ನಿರ್ದೇಶಿತ ಸದಸ್ಯ ಕೂಡ ಆಗಿದ್ದರು. ಬಳಿಕ ಎಐಎಂಐಎಂ ಪಕ್ಷ ಸೇರಿ ಪಾಲಿಕೆ ಚುನಾವಣೆಯಲ್ಲಿ 71ನೇ ವಾರ್ಡ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಈ ನಡುವೆ ಬಯೋಡೀಸೆಲ್ ಅಕ್ರಮ ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇಲ್ ಮೇಲೆ ಹೊರಗೆ ಬಂದಿದ್ದರು ಎಂದು ಮೂಲಗಳು ತಿಳಿಸಿವೆ.
ಇನ್ನು ಮೊಹಮ್ಮದ ಆಸೀಫ್ನನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ಕರೆ ತಂದಿದ್ದಾರೆ. ಗಲಭೆ ನಡೆದ ಬಳಿಕ ನಾಪತ್ತೆಯಾಗಿದ್ದರು. ಈತನ ಹುಡುಕಾಟದಲ್ಲಿ ಇದ್ದ ಪೊಲೀಸರಿಗೆ ಶುಕ್ರವಾರ ಬೆಂಗಳೂರಲ್ಲಿ ಸೆರೆ ಸಿಕ್ಕಿದ್ದಾರೆ. ಈತನಿಗೂ ವಾಸೀಂ ಪಠಾಣ ಸಂಪರ್ಕವಿತ್ತು. ಅಂದು ಜನರನ್ನು ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.

ಹಳೇ ಹುಬ್ಬಳ್ಳಿ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಈ ಇಬ್ಬರ ಪಾತ್ರದ ಕುರಿತು ಪೊಲೀಸರ ತನಿಖೆ ಮುಂದುವರಿದಿದೆ. ಆದರೆ ಯಾವ ಪ್ರಮಾಣದಲ್ಲಿ ಇತ್ತು. ಪೂರ್ವ ನಿಯೋಜಿತ ಕೃತ್ಯವಾಗಿದ್ದರೆ ಇವರಿಬ್ಬರ ಪಾತ್ರ ಏನಿತ್ತು? ಜನರನ್ನು ಸೇರಿಸುವುದರೊಂದಿಗೆ ಮತ್ತೇನು ಮಾಡಿದ್ದಾರೆ ಎಂಬುದರ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದ ಪೋಸ್ಟ್‌ವೊಂದನ್ನು ವಿರೋಧಿಸಿ ಹಳೇ ಹುಬ್ಬಳ್ಳಿಯಲ್ಲಿ ಒಂದು ಕೋಮಿನ ಜನರು ಜಮಾವಣೆಯಾಗಿ ಕಲ್ಲು ತೂರಾಟ ನಡೆಸಿದರು. ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಿಡಿಗೇಡಿಗಳು ಪೊಲೀಸ್‌ ಜೀಪ್‌ ಮೇಲೆ ಹಾಗೂ ಪೊಲೀಸ್‌ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ಘಟನೆಯಲ್ಲಿ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು.

ಈ ಘಟನೆಯ ಮಾಸ್ಟರ್‌ ಮೈಂಡ್‌ ಎಂದೇ ಬಿಂಬಿತರಾಗಿರುವ ಮೌಲ್ವಿ ವಸೀಂ ಪಠಾಣ್‌ ಅವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಅಜ್ಞಾನ ಸ್ಥಳದಿಂದ ವೀಡಿಯೋವೊಂದನ್ನು ವಸೀಂ ಪಠಾಣ್‌ ಹರಿಯಬಿಟ್ಟಿದ್ದ. ಇದರ ಜಾಡು ಹಿಡಿದು ಕಾರ್ಯಾರಣೆ ನಡೆಸಿದ ಪೊಲೀಸರು ವಸೀಂ ಪಠಾಣ್‌ ಅವನನ್ನು ಮುಂಬೈನಲ್ಲಿ ಬಂಧಿಸಿದರು. ಅಲ್ಲಿಂದ ಹುಬ್ಬಳ್ಳಿಗೆ ಪೊಲೀಸರು ಕರೆ ತಂದಿದ್ದು ವಿಚಾರಣೆಗೊಳಪಡಿಸಿದ್ದಾರೆ.

ಹಿಂದಿನ ಲೇಖನಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಸತತ 3ನೇ ಬಾರಿ ಚಿನ್ನ ಗೆದ್ದ ಇತಿಹಾಸ ಸೃಷ್ಟಿಸಿದ ರವಿ ಕುಮಾರ್ ದಹಿಯಾ
ಮುಂದಿನ ಲೇಖನಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಭೇಟಿ ನಡುವೆ ರ್ಯಾಲಿ ಸ್ಥಳದಿಂದ 12 ಕಿಮೀ ದೂರದಲ್ಲಿ ಸ್ಫೋಟ