ನಾಗಮಂಗಲ (Nagamangala): ವ್ಯಕ್ಯಿಯೊಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದದಿಂದ ನಿಂದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ನಟ ಜೈ ಜಗದೀಶ್ ಅವರು ಇಂದು ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಜೊತೆಗೆ ಈ ಪ್ರಕರಣವನ್ನು ರಾಜೀ ಮಾಡಲಾಗಿದೆ.
ಜಯರಾಮೇಗೌಡ ಎಂಬವರು ಜೈಜಗದೀಶ್ ವಿರುದ್ಧ ದೂರು ದಾಖಲಿಸಿದ್ದರು. ಜಯರಾಮೇಗೌಡ ನೀಡಿದ ದೂರಿನ್ವಯ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು.
ಪೊಲೀಸ್ ಠಾಣೆಗೆ ಹಾಜರಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೈಜಗದೀಶ್, ಘಟನೆಯಲ್ಲಿ ಯಾವುದೇ ರೀತಿ ಹಲ್ಲೆ ನಡೆದಿಲ್ಲ. ಕಳೆದ ಭಾನುವಾರ (ಜೂನ್ 5) ನನ್ನ ಮತ್ತು ಚಂದ್ರು ನಡುವೆ ಸಣ್ಣ ಭಿನ್ನಾಭಿಪ್ರಾಯ ಆಗಿತ್ತು. ಅಂದು ನಾನು ಕಾರಿನಲ್ಲಿ ಹೋಗುವಾಗ ಬಸ್ಸಿನಿಂದ ಅವರು ನೀರಿನ ಬಾಟಲಿಯನ್ನು ಎಸೆದಿದ್ದರು. ಅದಕ್ಕೆ ಪ್ರಶ್ನೆ ಮಾಡಿದ್ದು ಬಿಟ್ಟರೆ ಯಾವುದೇ ರೀತಿಯ ಹಲ್ಲೆ ಮಾಡಿರಲಿಲ್ಲ. ಆ ಬಗ್ಗೆ ಇಂದು ಕುಳಿತು ಮಾತುಕತೆ ನಡೆಸಿ, ಬಗೆಹರಿಸಿಕೊಂಡಿದ್ದೇವೆ. ನಾವೀಗ ರಾಜಿಯಾಗಿದ್ದೇವೆ. ನಾವಿಬ್ಬರು ಈಗ ಸ್ನೇಹಿತರಾಗಿದ್ದೇವೆ. ಅಂದು ಯಾವುದೇ ಗಲಾಟೆಯಾಗಿರಲಿಲ್ಲ, ಸಣ್ಣ ಭಿನ್ನಾಭಿಪ್ರಾಯ ಆಗಿತ್ತು ಅಷ್ಟೇ ಎಂದು ಹೇಳಿದ್ದಾರೆ.
ಏನಿದು ಘಟನೆ?
ಜೂನ್ 5ರಂದು ಬೆಳ್ಳೂರು ಸಮೀಪ ಜೈಜಗದೀಶ್ ಕಾರಿನಲ್ಲಿ ಹೋಗುತ್ತಿದ್ದರು. ಅದೇ ಸಮಯಕ್ಕೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಕಾರಿನ ಮೇಲೆ ಬಾಟಲ್ ಎಸೆದಿದ್ದಕ್ಕಾಗಿ ಜೈಜಗದೀಶ್ ಜಗಳ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಬಸ್ಸಿನ ಬಳಿ ಬಂದು ಬಾಟಲಿ ಎಸೆದ ಮೇಲೆ ವ್ಯಕ್ತಿಯ ಮೇಲೆ ಜೈಜಗದೀಶ್ ಹಲ್ಲೆ ನಡೆಸಿದ್ದಾರೆ. ಬಸ್ಸಿನಿಂದ ಯಾಕೆ ಬಾಟಲಿ ಎಸೆಯುತ್ತಿಯಾ ಎಂದು ಪ್ರಶ್ನಿಸಿ ಕೆಟ್ಟ ಶಬ್ದಗಳಿಂದ ಬೈದದ್ದೂ ಅಲ್ಲದೇ, ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು.