ಬಾಗಲಕೋಟೆ (Bagalakote): ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವ ಮುಸ್ಲಿಂ ಟೋಪಿ ಧರಿಸಿದ್ದ ಕಾರಣಕ್ಕಾಗಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, 7 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
ಕಾಲೇಜಿನ ಪ್ರಾಂಶುಪಾಲ ಮತ್ತು ಆರು ಜನ ಪೊಲೀಸರ ವಿರುದ್ಧ ಎಫ್ಐಆರ್ ದಾಖಲು ಆಗಿದ್ದು, ಸ್ಥಳೀಯ ನ್ಯಾಯಾಲಯ ತನಿಖೆ ನಡೆಸುವಂತೆ ಸೂಚನೆ ನೀಡಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ನವೀದ್ ಹಸನ್ ಸಾಬ್ ಥರಾತರಿ(19) ಹಲ್ಲೆಗೊಳಗಾದ ವಿದ್ಯಾರ್ಥಿ.
ಫೆಬ್ರವರಿ 18ರಂದು ಈ ಘಟನೆ ನಡೆದಿದೆ. ಟೋಪಿ ಧರಿಸಿದ್ದಕ್ಕೆ ನವೀದ್ ನನ್ನು ಅವಮಾನಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಅಂದು ನವೀದ್ ನನ್ನು ಅವಮಾನಿಸಿ ಹಲ್ಲೆ ನಡೆಸಿ ಕಾಲೇಜಿಗೆ ಪ್ರವೇಶಿದಂತೆ ವಿದ್ಯಾರ್ಥಿಯನ್ನು ತಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ದೂರಿನ ಪ್ರಕಾರ ನವೀದ್ ನನ್ನು ಎರಡು ಗಂಟೆಗಳ ಕಾಲ ಲೆದರ್ ಬೆಲ್ಟ್ ನಿಂದ ಹೊಡೆದಿದ್ದಾರೆ. ಪೊಲೀಸ್ ಸಬ್ ಇನ್ ಸ್ಪೆಕ್ಟರ್ ರಾಜು ಬೀಳಗಿ, ಪೊಲೀಸ್ ಅಧಿಕಾರಿಗಳಾದ ಗಣಿ ಪಿಎಚ್, ಮಲ್ಲಿಕಾರ್ಜುನ್ ಕೆಂಚಣ್ಣನವರ್, ಕಳತೆ ಎಸ್ ಬಿ, ಮದನಮಟ್ಟಿ ಎಸ್ ಸಿ, ಸಣ್ಣಟ್ಟಿ ಹಾಗೂ ಪ್ರಥಮ ದರ್ಜೆ ಸರ್ಕಾರಿ ಕಾಲೇಜು ಪ್ರಾಚಾರ್ಯ ಅಣ್ಣಪ್ಪಯ್ಯ ಅವರ ಹೆಸರು ಎಫ್ಐಆರ್ ನಲ್ಲಿ ದಾಖಲಾಗಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 109, 295 (ಎ), 323, 324, 341, 342 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ನ್ಯಾಯಾಲಯವು ಜೂನ್ 30 ರಂದು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ಜಮಖಂಡಿ ಉಪ ಎಸ್ ಪಿ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ಮಾಡಲಾಗಿದೆ.