ಬೆಂಗಳೂರು(Bengaluru): ರಾಣಿ ಎಲಿಜಬೆತ್, ಉಮೇಶ್ ಕತ್ತಿ ಸೇರಿದಂತೆ ನಿಧನರಾದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಇವರೊಂದಿಗೆ ಮಾಜಿ ಸಚಿವ ಪ್ರಭಾಕರ್ ರಾಣೆ, ಮಾಜಿ ಶಾಸಕ ಎ ಕೆಂಪೇಗೌಡ, ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಮಾಜಿ ಶಾಸಕ ದೇಸಾಯಿ, ಸುಗಮ ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ಸ್ಪೀಕರ್ ಕಾಗೇರಿ ಮಂಡಿಸಿದ ಸಂತಾಪ ಸೂಚಕ ಪ್ರಸ್ತಾಪಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ ಕ್ರಿಯಾಶೀಲ ವರ್ಣರಂಜಿತ ರಾಜಕಾರಣಿ. ತೀಕ್ಷ್ಣವಾದ ಸಾಮಾನ್ಯ ಜ್ಞಾನ ಬುದ್ದಿವಂತಿಕೆ ಹೊಂದಿದವರಾಗಿದ್ದರು ಎಂದು ಸ್ಮರಿಸಿದರು.
ಶಾಸಕರಾದ ಮೇಲೆ ಸಣ್ಣ ವಯಸ್ಸಿನಲ್ಲಿ ರಾಮಕೃಷ್ಣ ಹೆಗಡೆ ಹಾಗೂ ಎಸ್ ಆರ್ ಬೊಮ್ಮಾಯಿಗೆ ಹತ್ತಿರವಾಗಿದ್ದರು. ಮುಕ್ತವಾದ ಮನಸ್ಸು ಮಾತು ಹೊಂದಿದ್ದರು. ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದರು.ಎಲ್ಲ ಪಾರ್ಟಿ ಬಿ ಫಾರಂ ನನ್ನ ಜೇಬಿನಲ್ಲಿ ಇದೆ ಎಂದು ತಮಾಷೆಗೆ ಹೇಳುತ್ತಿದ್ದರು. ಎಲ್ಲ ಪಕ್ಷದವರ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.
ಅವರು ಜನರ ಮಧ್ಯೆ ಇದ್ದು ಬೆಳೆದ ರಾಜಕಾರಣಿ. ಸ್ನೇಹಮಯ ಸ್ವಭಾವ ಹೊಂದಿದ್ದರು. ಕತ್ತಿ ಬಂಧಿಖಾನೆ, ತೋಟಗಾರಿಕೆ ಸಚಿವರಾಗಿದ್ದರು. ಒಮ್ಮೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ಪತ್ರ ಕೊಡಲು ಹೋಗಿದ್ದರು. ಆದರೆ ಎಸ್ ಆರ್ ಬೊಮ್ಮಾಯಿ ಅವರು ಸಮಾಧಾನ ಮಾಡಿದ್ದರು. ನಂತರ ಅವರಿಗೆ ಪಿಡಬ್ಲ್ಯೂಡಿ ಖಾತೆ ಸಿಕ್ಕಿತು ಎಂದು ನೆನಪಿಸಿಕೊಂಡರು.
ಉತ್ತರ ಕರ್ನಾಟಕದ ಬಗ್ಗೆ ಪದೇ ಪದೇ ಧ್ವನಿ ಎತ್ತುತ್ತಿದ್ದರು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು ಎಂಬ ಕಳಕಳಿಯಲ್ಲಿ ಮಾತನಾಡುತ್ತಿದ್ದರು ಹೊರತು ರಾಜ್ಯ ಒಡೆಯುವ ಉದ್ದೇಶ ಇರಲಿಲ್ಲ ಎಂದು ಕತ್ತಿ ಹೇಳಿಕೆಗಳನ್ನು ಸಿಎಂ ಸಮರ್ಥಿಸಿಕೊಂಡರು.
ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಉಮೇಶ್ ಕತ್ತಿ ಹಿರಿಯ ಮುತ್ಸದ್ದಿ ರಾಜಕಾರಣಿ, ಸ್ನೇಹ ಜೀವಿಯಾಗಿದ್ದವರು. ಹಾಸ್ಯ ಪ್ರವೃತ್ತಿ ಹೊಂದಿದ್ದರು. ಕ್ಷೇತ್ರದಲ್ಲಿ ಅಪಾರ ಜನರ ಪ್ರೀತಿ ವಿಶ್ವಾಸಗಳಿಸಿದ್ದರು ಎಂದರು.
ವಿರೋಧ ಪಕ್ಷದಲ್ಲಿ ಇದ್ದರೂ ಕಳೆದ ಚುನಾವಣೆಯಲ್ಲಿ ಮನೆಗೆ ಊಟಕ್ಕೆ ಕರೆದಿದ್ದರು. ನಾನೂ ಹೋಗಿದ್ದೆ, ಎರಡು ಗಂಟೆ ಅವರ ಮನೆಯಲ್ಲಿದ್ದೆ. ಆದರೆ ಅವರು ಏನು ಮಾತನಾಡಿದ್ದರು ಎಂದು ಬಹಿರಂಗ ಮಾಡಲು ಆಗಲ್ಲ ಎಂದರು.
ಬೆಳಗಾವಿಯಲ್ಲಿ ಅವರದ್ದೇ ಆದ ಶಕ್ತಿ ಗಳಿಸಿದ್ದರು. ಉದ್ಯಮ, ರಾಜಕಾರಣ, ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿ ಕಂಡಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ವರ್ಣರಂಜಿತ ರಾಜಕಾರಣಿಯಾಗಿದ್ದರು. ಒಂದು ರೀತಿಯಲ್ಲಿ ಅಜಾತಶತ್ರು ಆಗಿದ್ದರು ಕತ್ತಿ. ಅವರು ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರವಾಗಿ ಮಾತನಾಡುತ್ತಿದ್ದರು. ಆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಕೇಳಬೇಡಿ ಎಂದಿದ್ದೆ ಎಂದು ನೆನಪಿಸಿಕೊಂಡರು.