ನವದೆಹಲಿ: ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಬೇಕೆಂಬ ಛಲ ತೊಟ್ಟಿರುವ ಬಿಜೆಪಿ 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನಾಲ್ಕು ದಿನಗಳ ನಿರಂತರ ಕಸರತ್ತು ಹಾಗೂ ಸರಣಿ ಸಭೆಗಳ ಬಳಿಕ ಪಕ್ಷವು ಮೊದಲ ಪಟ್ಟಿ ಪ್ರಕಟಿಸಿದ್ದು, ಎಂಟು ಶಾಸಕರಿಗೆ ಟಿಕೆಟ್ ನೀಡದೇ, ಹೊಸಮುಖಗಳಿಗೆ ಮಣೆ ಹಾಕಲಾಗಿದೆ.
ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಂಗಳವಾರ ರಾತ್ರಿ 9 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರದಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದರು.
ಯಾರಿಗೆ ಟಿಕೆಟ್ ?
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಕಂದಾಯ ಸಚಿವ ಆರ್. ಅಶೋಕ ಅವರನ್ನು ಕಣಕ್ಕೆ ಇಳಿಸುವ ಮೂಲಕ ಕಾಂಗ್ರೆಸ್‌ನ ‘ಜೋಡಿ ಎತ್ತು’ಗಳನ್ನು ಕಟ್ಟಿ ಹಾಕುವ ರಣತಂತ್ರ ಹೆಣೆದಿದೆ. ಅಶೋಕ ಅವರು ಪದ್ಮನಾಭನಗರ ಹಾಗೂ ಸೋಮಣ್ಣ ಅವರು ಚಾಮರಾಜನಗರದಿಂದಲೂ ಸ್ಪರ್ಧೆ ಮಾಡಲಿದ್ದಾರೆ. ಸಚಿವರ ಪೈಕಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಬದಲು ಪುತ್ರ ಸಿದ್ಧಾರ್ಥ ಸಿಂಗ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಮೀನುಗಾರಿಕಾ ಸಚಿವ ಅಂಗಾರ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಚುನಾವಣಾ ರಾಜಕಾರಣದಿಂದ ನಿವೃತ್ತರಾಗುವುದಾಗಿ ಪ್ರಕಟಿಸಿರುವ ಈಶ್ವರಪ್ಪ ಪ್ರತಿನಿಧಿಸುವ ಶಿವಮೊಗ್ಗ ಕ್ಷೇತ್ರಕ್ಕೆ ಹುರಿಯಾಳುವಿನ ಹೆಸರನ್ನು ಘೋಷಿಸಿಲ್ಲ. ಈ ಸಲ ಕಣಕ್ಕೆ ಇಳಿಯದಂತೆ ಹೈಕಮಾಂಡ್ ಸೂಚಿಸಿದ್ದು, ನಾನು ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಹೈಕಮಾಂಡ್’ಗೆ ಸಡ್ಡು ಹೊಡೆದಿದ್ದರು. ಅವರು ಪ್ರತಿನಿಧಿಸುವ ಹುಬ್ಬಳ್ಳಿ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಅಂತಿಮಗೊಳಿಸದೆ ಕುತೂಹಲವನ್ನು ಉಳಿಸಲಾಗಿದೆ.
ಹಾಲಿ ಶಾಸಕರು ಇರುವ ಮಹದೇವಪುರ (ಅರವಿಂದ ಲಿಂಬಾವಳಿ), ಬೈಂದೂರು (ಸುಕುಮಾರ ಶೆಟ್ಟಿ), ಮೂಡಿಗೆರೆ (ಎಂ.ಪಿ.ಕುಮಾರಸ್ವಾಮಿ) ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.
ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಎಲ್ಲ ಶಾಸಕರಿಗೆ ಟಿಕೆಟ್ ನೀಡಲಾಗಿದೆ. ಹೊಸಕೋಟೆಯಲ್ಲಿ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮಗನಿಗೆ ಟಿಕೆಟ್ ಕೇಳಿದ್ದರು. ಆದರೆ, ಪಕ್ಷವು ಅವರಿಗೇ ಟಿಕೆಟ್ ನೀಡಿದೆ.
ಹಿರಿಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಎಸ್.ಸುರೇಶ ಕುಮಾರ್, ತಿಪ್ಪಾರೆಡ್ಡಿ, ನಾಗೇಶ್ ಅವರಿಗೆ ಟಿಕೆಟ್ ನೀಡುವ ಮೂಲಕ ಹಿರಿತನಕ್ಕೆ ಮನ್ನಣೆ ನೀಡಿದೆ. ಚಾಮರಾಜಪೇಟೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ ರಾವ್, ಜಿ.ಪರಮೇಶ್ವರ ಪ್ರತಿನಿಧಿಸುವ ಕೊರಟಗೆರೆಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್ ಹಾಗೂ ಮಧುಗಿರಿ ಕ್ಷೇತ್ರದಲ್ಲಿ ಸ್ವಯಂನಿವೃತ್ತಿ ಪಡೆದಿರುವ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕೃಷ್ಣಬೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈ ಸಲ ಹೊಸ ಮುಖಕ್ಕೆ (ತಮ್ಮೇಶ ಗೌಡ) ಅವಕಾಶ ನೀಡಿದೆ. ಕೋಲಾರದಲ್ಲಿ ಕುರುಬ ಸಮುದಾಯಕ್ಕೆ ಸೇರಿದ, ಮಾಜಿ ಶಾಸಕ ವರ್ತೂರು ಪ್ರಕಾಶ್ ಅವರನ್ನು ಹುರಿಯಾಳುವನ್ನಾಗಿ ಬಿಜೆಪಿ ಕಣಕ್ಕೆ ಇಳಿಸಿದೆ.