ಮನೆ ರಾಜ್ಯ ವಿಧಾನಸಭಾ ಚುನಾವಣೆ: ಬ್ಯಾಂಕ್ ಮುಖ್ಯಸ್ಥರ ಸಹಕಾರ ಮುಖ್ಯ ಎಂದ ಜಿಲ್ಲಾಧಿಕಾರಿ

ವಿಧಾನಸಭಾ ಚುನಾವಣೆ: ಬ್ಯಾಂಕ್ ಮುಖ್ಯಸ್ಥರ ಸಹಕಾರ ಮುಖ್ಯ ಎಂದ ಜಿಲ್ಲಾಧಿಕಾರಿ

0

ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಂಕ್ ಮುಖ್ಯಸ್ಥರ ಸಹಕಾರ ಮುಖ್ಯವಾಗಿದ್ದು, ಹಣಕಾಸು ವರ್ಗಾವಣೆ ವಿಚಾರದಲ್ಲಿ ಅಗತ್ಯ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಬ್ಯಾಂಕ್ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಮಾದರಿ ನೀತಿಸಂಹಿತೆ ಜಾರಿಗೆ ಬಂದ ದಿನದಿಂದ ಚುನಾವಣಾ ಆಯೋಗದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಣ ಸಾಗಣೆ ಮಾಡುವವರ ಬಳಿ ಅಗತ್ಯ ದಾಖಲೆಗಳಿರಬೇಕು ಎಂದರು.

ಒಂದು ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಡ್ರಾ ಮಾಡಿದ್ದರೆ, ಒಂದೇ ಖಾತೆಯಿಂದ ಹೆಚ್ಚು ಜನರಿಗೆ ಹಣ ಹೋಗಿದ್ದರೆ ಅಥವಾ ಅಭ್ಯರ್ಥಿ, ಅಭ್ಯರ್ಥಿಯ ಹೆಂಡತಿಯ ಖಾತೆಯಿಂದ ₹ 1 ಲಕ್ಷಕ್ಕಿಂತ ಹೆಚ್ಚು ಹಣ ವರ್ಗಾವಣೆ ಆಗಿದ್ದರೆ ಆ ವಿಷಯವನ್ನು ನೋಡಲ್ ಅಧಿಕಾರಿಗಳ ಗಮನಕ್ಕೆ ಬಂದಿರಬೇಕು. ₹ 10 ಲಕ್ಷಕ್ಕಿಂತ ಹೆಚ್ಚು ಹಣ ವರ್ಗಾವಣೆಯಾದ ವಿಷಯ ಆದಾಯ ತೆರಿಗೆ ಇಲಾಖೆಯ ನೋಡಲ್ ಅಧಿಕಾರಿಯ ಗಮನಕ್ಕೆ ತರಬೇಕಾಗುತ್ತದೆ ಎಂದು ತಿಳಿಸಿದರು.

ಎ.ಟಿ‌.ಎಂ.ಗಳಿಗೆ ಹಣ ತುಂಬುವವರು ಬೆಳಿಗ್ಗೆ 10ರಿಂದ ಸಂಜೆ 5ರೊಳಗೆ ಆ ಕೆಲಸ ಮಾಡಬೇಕು. ಪ್ರತಿ ಎಂ.ಟಿ.ಎಂ.ಗೆ ಹಣ ತುಂಬಿರುವುದಕ್ಕೆ ಸೂಕ್ತ ದಾಖಲೆ ಹೊಂದಿರಬೇಕು. ಸಂಜೆ 5ರ ನಂತರ ದಾಖಲೆಗಳಿದ್ದರೂ ಹಣ ಸಾಗಣೆಗೆ ಅನುಮತಿ ಇರುವುದಿಲ್ಲ. ವಶಪಡಿಸಿಕೊಂಡ ಹಣ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ವಾಪಸ್ ಪಡೆಯಲು ಆಗದ ಕಾರಣ ಅಗತ್ಯ ದಾಖಲೆಗಳು ಮುಖ್ಯ ಎಂದು ಹೇಳಿದರು.

ಲೀಡ್ ಬ್ಯಾಂಕ್ ಅಧಿಕಾರಿಗಳು ವಾಟ್ಸ್‌ ಆ್ಯಪ್‌ ಗ್ರೂಪ್ ರಚಿಸಿ ಅಗತ್ಯ ಮಾಹಿತಿಗಳನ್ನು ಎಲ್ಲಾ ಬ್ಯಾಂಕ್‌ ಗಳಿಗೆ ನೀಡಬೇಕು ಎಂದರು.