ಮನೆ ರಾಜ್ಯ ವಿಧಾನಸಭಾ ಚುನಾವಣೆ: ಮೈಸೂರು ಜಿಲ್ಲೆಯಾದ್ಯಂತ 29 ಅರೆ ಸೇನಾಪಡೆ ತುಕಡಿ ನಿಯೋಜನೆ

ವಿಧಾನಸಭಾ ಚುನಾವಣೆ: ಮೈಸೂರು ಜಿಲ್ಲೆಯಾದ್ಯಂತ 29 ಅರೆ ಸೇನಾಪಡೆ ತುಕಡಿ ನಿಯೋಜನೆ

0

ಮೈಸೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸೂಕ್ತ  ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 29 ಅರೆ ಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ.

Join Our Whatsapp Group

ಮೈಸೂರು ನಗರಕ್ಕೆ ಈಗಾಗಲೇ ತಲಾ 80 ಮಂದಿ ಇರುವ 7 ಅರೆ ಸೇನಾಪಡೆ ತುಕಡಿಗಳು ಆಗಮಿಸಿದ್ದು, ಬಹುತೇಕ ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ವಾಹನ ತಪಾಸಣೆಗೆ ನಿಯೋಜಿಸಲಾಗಿದೆ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಇನ್ನೂ 3 ತುಕಡಿಗಳು ಮೈಸೂರು ನಗರಕ್ಕಾಗಮಿಸಲಿವೆ ಎಂದು ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದ್ದಾರೆ.

ಸಿವಿಲ್, ಟ್ರಾಫಿಕ್, ಸಿಎಆರ್, ಕೆಎಸ್ಆರ್ಪಿ ಕಮಾಂಡೋ ಪಡೆ, ಅಶ್ವಾರೋಹಿದಳ ಸೇರಿದಂತೆ ಸುಮಾರು 4 ಸಾವಿರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿದ್ದು, ಇದೀಗ ಸುಮಾರು 800 ಅರೆ ಸೇನಾಪಡೆ ಸಿಬ್ಬಂದಿಯನ್ನು ನೀಡುತ್ತಿರುವುದರಿಂದ ಚುನಾವಣಾ ಭದ್ರತೆಗೆ ಬಳಸಿಕೊಳ್ಳಲಾಗುವುದು  ಎಂದರು.

ಸೂಕ್ಷ್ಮಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲು ಸರ್ವೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅರೆ ಸೇನಾ ಪಡೆ ಸಿಬ್ಬಂದಿಗೆ ವಸತಿ, ಊಟ-ತಿಂಡಿ ವ್ಯವಸ್ಥೆ ಮಾಡಿ ಮತದಾನದಂದು ಬಂದೋಬಸ್ತ್ ಕರ್ತವ್ಯ ನಿರ್ವಹಿಸುವ ಕುರಿತು ತರಬೇತಿ ನೀಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಅದೇ ರೀತಿ ಮೈಸೂರು ಜಿಲ್ಲೆಗೆ ಈಗಾಗಲೇ 13 ಅರೆ ಸೇನಾಪಡೆ ತುಕಡಿಗಳು ಆಗಮಿಸಿದ್ದು, ಇನ್ನೂ 6 ತುಕಡಿಗಳು ಬರಲಿವೆ. ಜಿಲ್ಲೆಯ ಎಲ್ಲಾ ತಾಲೂಕುಗಳ ಪ್ರಮುಖ ರಸ್ತೆಗಳಲ್ಲಿರುವ ಪೊಲೀಸ್ ಚೆಕ್ ಪೋಸ್ಟ್ ಗಳಗೆ ವಾಹನ ತಪಾಸಣೆ ಮಾಡಲು ನಿಯೋಜಿಸಲಾಗಿದೆ. ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ನಡೆಸಲಿರುವ ಪ್ರಚಾರ ಸಭೆ, ರ್ಯಾಲಿ, ರೋಡ್ ಶೋಗಳಿಗೂ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.

ಜಿಲ್ಲಾ ಪೊಲೀಸ್ ಘಟಕ, ಡಿಎಆರ್ ಪೊಲೀಸ್ ಸಿಬ್ಬಂದಿ ಜತೆಗೆ ಅರೆ ಸೇನಾಪಡೆಯು ಚುನಾವಣಾ ಭದ್ರತಾ ಕರ್ತವ್ಯಕ್ಕೆ ಸಾಥ್ ನೀಡಲಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ಭಾರೀ ಭದ್ರತೆ ಒದಗಿಸಿ ಕಟ್ಟೆಚ್ಚರ ವಹಿಸಲಾಗಿದೆ.