ಮನೆ ಅಪರಾಧ ಅಥಣಿ: 8 ತಿಂಗಳ ಗರ್ಭಿಣಿ ಕೊಂದ ದುಷ್ಕರ್ಮಿಗಳು

ಅಥಣಿ: 8 ತಿಂಗಳ ಗರ್ಭಿಣಿ ಕೊಂದ ದುಷ್ಕರ್ಮಿಗಳು

0

ಚಿಕ್ಕೋಡಿ: ಎಂಟು ತಿಂಗಳ ಗರ್ಭಿಣಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

Join Our Whatsapp Group

ಗ್ರಾಮದ ಮಹಿಳೆ ಸುವರ್ಣ ಮಠಪತಿ (37) ಕೊಲೆಯಾದ ತುಂಬು ಗರ್ಭಿಣಿ. ಮಹಿಳೆಗೆ ಈಗಾಗಲೇ ನಾಲ್ವರು ಹೆಣ್ಣು ಮಕ್ಕಳಿದ್ದು, ಐದನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಸ್ಥಳಕ್ಕೆ ಅಥಣಿ ಪೊಲೀಸರು ಹಾಗೂ ಬೆಳಗಾವಿ ಹೆಚ್ಚುವರಿ ಎಸ್​ಪಿ ಶೃತಿ ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ಮಹಿಳೆಯದ್ದು ಬಡ ಕುಟುಂಬ. ಪತಿಯು ಗ್ರಾಮ ದೇವತೆಯ ಅರ್ಚಕರಾಗಿ ಕೆಲಸ ಮಾಡಿಕೊಂಡು ಜೀವನ ಸಲಹುತ್ತಿದ್ದರು. ಮಹಿಳೆಯ ಪತಿ ಮಧ್ಯಾಹ್ನ ಹಸುಗಳಿಗೆ ಮೇವು ತರಲು ತೋಟಕ್ಕೆ ಹೋಗಿದ್ದರು. ಮಕ್ಕಳು ಕೂಡ ಶಾಲೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೋಟದಿಂದ ಮೇವು ತಂದ ಪತಿಯು ತನ್ನ ಪತ್ನಿಯನ್ನು ಕರೆದರೂ ಮನೆಯಿಂದ ಹೊರಗೆ ಬಂದಿಲ್ಲ. ಆಗ ಸಮೀಪ ಬಂದು ನೋಡಿದಾಗ ಗರ್ಭಿಣಿಯು ರಕ್ತದ ಮಡಿಲಿನಲ್ಲಿ ಬಿದ್ದು ನರಳಾಡುತ್ತಿರುವುದು ಕಂಡುಬಂದಿದೆ.

ತಕ್ಷಣವೇ, ಪಕ್ಕದ ಹಾರೂಗೇರಿ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಗಂಭೀರವಾಗಿ ಗಾಯಗೊಂಡ ಮಹಿಳೆ ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆ ಆರೋಪಿಗಳು ಯಾರು? ನಿಖರ ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.