ನವದೆಹಲಿ: ಉಮೇಶ್ ಪಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಾಗೂ ಸಮಾಜವಾದಿ ಪಕ್ಷದ ರಾಜಕಾರಣಿ ಅತೀಕ್ ಅಹ್ಮದ್ ಪುತ್ರ ಅಸಾದ್ ಅಹ್ಮದ್ ಹಾಗೂ ಗುಲಾಂ ಮೊಹಮ್ಮದ್ ನನ್ನು ಉತ್ತರ ಪ್ರದೇಶ ಪೊಲೀಸರು ಎನ್ ಕೌಂಟರ್ ನಲ್ಲಿ ಹೊಡೆದುರುಳಿಸಿದ್ದಾರೆ.
ಉತ್ತರಪ್ರದೇಶದ ಝಾನ್ಸಿಯಲ್ಲಿ ಪೊಲೀಸರಿಂದ ಎನ್ ಕೌಂಟರ್ ನಡೆದಿದ್ದು, ಘಟನೆಯಲ್ಲಿ ಕೂಡ ಹತ್ಯೆ ಮಾಡಲಾಗಿದೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅಸಾದ್ ಮತ್ತು ಗುಲಾಂ ಪ್ರಮುಖ ಆರೋಪಿಗಳಾಗಿದ್ದರು. ಆರೋಪಿಗಳ ಬಗ್ಗೆ ಸುಳಿವು ಕೊಟ್ಟವರಿಗೆ ತಲಾ ₹5 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಆರೋಪಿಗಳನ್ನು ಯುಪಿ ಎಸ್’ಟಿಎಫ್ ತಂಡ ಎನ್’ಕೌಂಟರ್ ಮಾಡಿದೆ ಎಂದು ವಿಶೇಷ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅವರ ಅಪಹರಣ ಪ್ರಕರಣದಲ್ಲಿ ಮಾಫಿಯಾ ಡಾನ್, ಮಾಜಿ ಸಂಸದ ಅತೀಕ್ ಅಹ್ಮದ್ ಅಪರಾಧಿ ಎಂದು ಸಾಬೀತಾಗಿದ್ದು, ಅವರಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ನೀಡಿದ್ದ ದೂರಿನನ್ವಯ ಅತೀಕ್ ಅಹ್ಮದ್, ಆತನ ಸಹೋದರ ಅಶ್ರಫ್, ಅಸಾದ್, ಗುಲಾಂ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿಗಳ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 147 (ಗಲಭೆ), 302 (ಕೊಲೆ), 307 (ಕೊಲೆಗೆ ಯತ್ನ) ಹಾಗೂ ಬೆದರಿಕೆ ಒಡ್ಡಿದ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.