ಮನೆ ಕಾನೂನು ಉಳಿತಾಯ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ನೀಡದ ಅಂಚೆ ಇಲಾಖೆ ಹೈಕೋರ್ಟ್ ಅಸಮಧಾನ

ಉಳಿತಾಯ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಬಡ್ಡಿ ನೀಡದ ಅಂಚೆ ಇಲಾಖೆ ಹೈಕೋರ್ಟ್ ಅಸಮಧಾನ

0

ಬೆಂಗಳೂರು: ಎಚ್‌’ಯುಎಫ್ ಪಿಪಿಎಫ್ ಉಳಿತಾಯ ಯೋಜನೆ ತಿದ್ದುಪಡಿಯಾಗಿದ್ದರೂ ಅದರ ಅಡಿಯಲ್ಲಿ ಹಣ ಹೂಡಿಕೆ ಮಾಡಿಸಿಕೊಂಡು ಅದಕ್ಕೆ ಬಡ್ಡಿ ನೀಡದೇ ಹೋದ ಅಂಚೆ ಇಲಾಖೆಯ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Join Our Whatsapp Group

ಈ ಸಂಬಂಧ ಬೆಂಗಳೂರಿನ ಕೆ.ಶಂಕರ್ ಲಾಲ್ ಎಂಬುವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದ್ದು, ಯೋಜನೆ ಅವಧಿ ಮುಗಿದಿದೆ ಎಂಬುದು ತಿಳಿದಿದ್ದರೂ ಠೇವಣಿ ಪಡೆಯಲಾಗಿದೆ. ತದನಂತರ 12 ವರ್ಷಗಳ ಕಾಲ ಸುಮ್ಮನಿದ್ದು ನೋಟಿಸ್‌ ಕಳುಹಿಸಲಾಗಿದೆ. ಇದು ನ್ಯಾಯೋಚಿತ ಕ್ರಮವಲ್ಲ. ಆದ್ದರಿಂದ, ಅರ್ಜಿದಾರರಿಗೆ ಬಡ್ಡಿ ಸಹಿತ ಹಣ ವಾಪಸ್ ನೀಡಬೇಕು ಎಂದು ಆದೇಶಿಸಿದೆ.

ಒಂದು ವೇಳೆ ಅಕ್ರಮವಾಗಿ ಖಾತೆ ತೆರೆದಿದ್ದರೆ ಅಥವಾ ಖಾತೆ ದಾರರು ಅದಕ್ಕೇನಾದರೂ ಹಣ ಹೂಡಿಕೆ ಮಾಡಿದ್ದಾರೆ ಎಂಬುದು ಕಂಡುಬಂದಿದ್ದರೆ ತಕ್ಷಣವೇ ಅದನ್ನು ಸರಿಪಡಿಸಲು ಪೋಸ್ಟ್ ಮಾಸ್ಟರ್ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಈ ರೀತಿ ಯಾವುದೇ ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯತನ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ಎಚ್‌’ಯುಎಫ್ (ಹಿಂದೂ ಅವಿಭಕ್ತ ಕುಟುಂಬ) ಪಿಪಿಎಫ್ (ಪಬ್ಲಿಕ್‌ ಪ್ರಾವಿಡೆಂಟ್‌ ಫಂಡ್‌) ಉಳಿತಾಯ ಯೋಜನೆ 2005ರಲ್ಲಿ ಮುಕ್ತಾಯವಾಗಿತ್ತು. ಅರ್ಜಿದಾರರು 2009ರಲ್ಲಿ ಅದೇ ಎಚ್‌ಯುಎಫ್ ಪಿಪಿಎಫ್ ಯೋಜನೆ ಅಡಿಯಲ್ಲಿ ಹಣ ಠೇವಣಿ ಇರಿಸಿದ್ದರು. ಅದು ಮಾರ್ಚ್‌ 2025ಕ್ಕೆ ಮುಕ್ತಾಯವಾಗಿ ಹಣ ಬರಬೇಕಿತ್ತು. ಆದರೆ, 12 ವರ್ಷದ ನಂತರ 2021ರಲ್ಲಿ ಅಂಚೆ ಮಾಸ್ಟರ್, 2005ರಲ್ಲಿ ಯೋಜನೆ ಅವಧಿ ಮುಗಿದು ಹೋಗಿದೆ. ಆನಂತರ ನೀವು ಹಣ ಆ ಯೋಜನೆಯ ಹೆಸರಿನಲ್ಲಿ ಠೇವಣಿ ಮಾಡಿದ್ದೀರಿ, ಹಾಗಾಗಿ ನಿಮಗೆ ಬಡ್ಡಿ ನೀಡಲಾಗದು ಎಂದು ನೋಟಿಸ್‌ ನೀಡಿದ್ದರು.

ಅರ್ಜಿದಾರರು ಈ ನೋಟಿಸ್‌ ಅನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಠೇವಣಿ ಖಾತೆ ತೆರೆಯುವಾಗ ಯಾವುದೇ ಮಾಹಿತಿ ನೀಡದೆ ತದನಂತರ ನೋಟಿಸ್ ಕಳುಹಿಸಿರುವುದು ನಿಯಮ ಬಾಹಿರ. ಆದ್ದರಿಂದ, ಬಡ್ಡಿ ಸಹಿತ ಹಣ ಹಿಂತಿರುಗಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.

ಹಿಂದಿನ ಲೇಖನಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪಿಎಸ್ ಐ ಅಮಾನತು
ಮುಂದಿನ ಲೇಖನಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ ಅತೀಕ್ ಅಹ್ಮದ್​ ಪುತ್ರ ಎನ್ ​ಕೌಂಟರ್ ​ನಲ್ಲಿ ಸಾವು