ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಅನಂತ ಬ್ರಹ್ಮಾಂಡಗಳ ಶಕ್ತಿಪುಂಜ ಶ್ರೀಲಲಿತೆ. ಸೃಷ್ಟಿಕರ್ತ ಬ್ರಹ್ಮನಿಗೆ ಜ್ಞಾನರೂಪಿಣಿಯಾಗಿ, ವೀಣಾಪಾಣಿಯಾಗಿ, ಶಾರದೆಯಾಗಿ ಜೊತೆಯಾದವಳು. ತಾನೇ ಸೃಜಿಸಿದ ಮಾಯಾಲೋಕದ ಪಾಲಕ, ಯೋಗಮಾಯಾ ರೂಪಿ ಶ್ರೀಹರಿಯ ಶ್ರೀಯಾಗಿ, ಸಕಲ ಸಂಪದದ ಒಡತಿ ಲಕ್ಷ್ಮೀಯಾಗಿ ಶಕ್ತಿ ತುಂಬಿದವಳು. ಸಂಹಾರಕ ಶಿವನ ಶಿವೆಯಾಗಿ ಕಾಲಾಂತಕ ಮಹಾಕಾಲನಿಗೆ ಮಹಾಕಾಲಿಯಾಗಿ ಪರಮಪುರುಷನಿಗೆ ಪ್ರಕೃತಿಯೇ ತಾನಾಗಿ ವಿರಾಜಮಾನಳಾದವಳು. ಅಂಡ, ಪಿಂಡ, ಬ್ರಹ್ಮಾಂಡಗಳ ಸಕಲ ಚರಾಚರ ವಸ್ತುಗಳ ಆಂತರ್ಯದ ಚೇತನವೇ ಅವಳು. ಸಮಸ್ತ ಜೀವಾತ್ಮಗಳ ಆತ್ಮವೇ ಅವಳು.
ನಿರಾಕಾರ ಓಂಕಾರವೇ ಮೂಲವಾಗಿ ಜಗತ್ತು ಶೂನ್ಯವಾಗಿದ್ದ ಸಂದರ್ಭದಲ್ಲಿ ತಾನು ವಿಕಾಸಗೊಳ್ಳಲು ಬಯಸಿದ ಆದಿಶಕ್ತಿ. ಪುರಮಪುರುಷನಾಗಿ ಆ ಪುರುಷನಿಗೆ ಪ್ರಕೃತಿಯಾಗಿ ವಿಕಾಸಗೊಂಡಳು. ಹಾಗಾಗಿಯೇ ಈ ಜಗತ್ತಿನ ಎಲ್ಲ ಜೀವಿಗಳಲ್ಲಿಯೂ ಪುರುಷನಿಲ್ಲದೆ ಸ್ತ್ರೀ ಇಲ್ಲ, ಸ್ತ್ರೀ ಇಲ್ಲದೇ ಪುರುಷನಿಲ್ಲ. ಮತ್ತೆ ವಿಕಾಸಗೊಂಡ ಆದಿಶಕ್ತಿ ತ್ರಿಮೂರ್ತಿಗಳಾಗಿ, ತ್ರಿಶಕ್ತಿಗಳಾಗಿ ವಿಕಾಸಗೊಂಡಳು. ಹೀಗೆ ವಿಕಾಸಗೊಳ್ಳುತ್ತಾ ಬ್ರಹ್ಮಾಂಡವಾದಳು. ಬ್ರಹ್ಮಾಂಡದ ಜೀವ ಜೀವರ ಆತ್ಮವಾದಳು.
ಪ್ರತಿ ಜೀವರ ಸಗುಣ, ನಿರ್ಗುಣಗಳೆಲ್ಲ ಅವಳೇ. ಶಕ್ತಿ ನಿಃಶಕ್ತಿಯೂ ಅವಳೇ.
ಎಲ್ಲವೂ ಅವಳೇ ಎಂದಾದರೆ ದೇವತೆಗಳು, ಅಸುರರೆಂಬ ಪ್ರತ್ಯೇಕತೆಯೇಕೆ? ದೇವಾಸುರ ಸಂಗ್ರಾಮವೇಕೆ? ಅತಿ ಸೂಕ್ಷ್ಮ ವಿಚಾರವಿದು.
ನಮ್ಮ ಪುಟ್ಟ ಶರೀರದೊಳಗೆ ಅಸಂಖ್ಯ ಜೀವಕೋಶಗಳು, ಅಸಂಖ್ಯ ಭಾವಗಳು, ಕಾಮ, ಕ್ರೋಧಾದಿ ಷಡ್ವೈರಿಗಳು ಇವೆಯಷ್ಟೇ? ಇಷ್ಟು ಪುಟ್ಟ ಕಾಯದಲ್ಲೇ ಇಷ್ಟು ವಿಚಾರಗಳು ಇರಬೇಕಾದರೆ ಅಸಂಖ್ಯ ಬ್ರಹ್ಮಾಂಡಗಳನ್ನೇ ತನ್ನೊಳಗೆ ಕೋಶಗಳಂತೆ ಹೊಂದಿದ ಆದಿಶಕ್ತಿಯಲ್ಲಿ ಎನಿತು ಭಾವಗಳು ಉದಿಸೀತು? ತನ್ನೊಳಗಿಂದ ಸೃಜಿಸಿದ ಋಣತ್ವವನ್ನು ತಾನೇ ನಾಶಮಾಡಿ ಜಗತ್ತಿಗೆ, ಜೀವ ಜೀವರಿಗೆ ಪಾಠ ನೀಡಿದವಳು ಶ್ರೀಲಲಿತೆ. ನಮ್ಮೊಳಗಿನ ವಿಕಾರಗಳು ನಮಗೇ ಸಂಕಷ್ಟವೊಡ್ಡಿದಾಗ ಅವುಗಳನ್ನು ಮೆಟ್ಟಿ ನಿಲ್ಲುವ ಬಗೆಯನ್ನು, ದಾರಿಯನ್ನು ತೋರಿಸಿಕೊಟ್ಟವಳು.
ಭಂಡಾಸುರನೇ ಮೊದಲಾದ ಅಸುರ ಗಣವ ತರಿಯಲು ಆವಿರ್ಭವಿಸಿದವಳು ಶ್ರೀಚಕ್ರರಾಜ ನಿಲಯೆ ಶ್ರೀಲಲಿತೆ. ಜೀವ ಜೀವರ ಶರೀರದಲ್ಲಿ ಸ್ಥಿತವಾಗಿರುವ ಮೂಲಾಧಾರಾದಿ ಸಪ್ತಚಕ್ರಗಳಿಂದ ರಚಿತವಾದ ಮಹಾಚಕ್ರದಲ್ಲಿ ಸ್ಥಿತವಾದ ಮನೋಮಂದಿರದ ಸ್ವರ್ಣಸಿಂಹಾಸನಾರೂಢಳಾಗಿದ್ದಾಳೆ ಆತ್ಮರೂಪಿ ಶ್ರೀಲಲಿತೆ. ಶ್ರೀಲಲಿತಾ ಸಹಸ್ರನಾಮಸ್ತೋತ್ರವನ್ನೇ ಗಮನಿಸೋಣ…
ಮೂಲಾಧಾರೈಕನಿಲಯಾ ಬ್ರಹ್ಮಗ್ರಂಥಿವಿಭೇದಿನೀ |
ಮಣಿಪೂರಾಂತರುದಿತಾ ವಿಷ್ಣುಗ್ರಂಥಿವಿಭೇದಿನೀ |
ಆಜ್ಞಾಚಕ್ರಾಂತರಾಲಸ್ಥಾ ರುದ್ರಗ್ರಂಥಿವಿಭೇದಿನೀ |
ಸಹಸ್ರಾರಾಂಬುಜಾರೂಢಾ ಸುಧಾಸಾರಾಭಿವರ್ಷಿಣೀ ||
ಮೂಲಾಧಾರದಲ್ಲಿ ನೆಲೆಯಾದವಳು, ಮಣಿಪೂರದ ಆಂತರ್ಯದಲ್ಲಿ ಉದಿತವಾದವಳು, ಆಜ್ಞಾಚಕ್ರದಲ್ಲಿ ಸ್ಥಿರವಾದವಳು, ಸಹಸ್ರಾರದಲ್ಲಿ ಆರೂಢಳಾಗಿ ಸುಧೆಯ ಸಾರದ ವರ್ಷವ ಹರಿಸಿದವಳು… ಅರ್ಥಾತ್ ಜೀವ ಜೀವರ ಸಹಸ್ರಾರದಲ್ಲಿ ಶ್ರೀಲಲಿತೆ ಆರೂಢಳಾಗಬೇಕು. ಅದಾಗಬೇಕೆಂದರೆ ಉಳಿದೆಲ್ಲ ಚಕ್ರಗಳು ಜಾಗೃತವಾಗಬೇಕು. ಹಾಗಾಗಬೇಕಾದರೆ ಎಲ್ಲ ವಿಕಾರರೂಪಿ ಅಸುರರನ್ನು ಮೆಟ್ಟಿ ನಿಲ್ಲಬೇಕು.
ಭಂಡಾಸುರನೆಂಬೋ ಅಸುರದೊರೆ ಅಸುರಗಣವ ಕೂಡಿಕೊಂಡು ಮೂಲೋಕವ ಕಂಗೆಡಿಸಿದ ಎಂದು ಪುರಾಣಗಳಲ್ಲಿ ಓದಿರುತ್ತೇವೆ. ಇದನ್ನೇ ಜೀವ ಜೀವರ ವಿಕಾರಗಳಿಗೆ ಅನ್ವಯಿಸಿಕೊಳ್ಳೋಣ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ ಅರಿಗಳು ನಮ್ಮ ಮನದಲ್ಲಿ ಮನೆಮಾಡಿದರೆ ಮೇಧೆ ಮೆಲ್ಲುತ್ತವೆ. ಜೀವ ಜೀವರ ಬುದ್ಧಿ ಭ್ರಮಣೆಯಾಗುತ್ತದೆ. ಅಹಂಕಾರ ತಾಂಡವವಾಡುತ್ತದೆ. ಮನುಷ್ಯ ಮೃಗನಾಗುತ್ತಾನೆ. ಮಹಿಷಾಸುರನೇ ಈ ಮೃಗತ್ವದ ಸಂಕೇತ. ಮನದಲ್ಲಿ ಕಲ್ಮಷವೇ ತುಂಬಿಕೊಂಡಾಗ ಎಷ್ಟೇ ಬುದ್ಧಿ ಹೇಳಿದರೂ ಕಲ್ಮಷ ನಾಶವಾಗದು. ಮಧು, ಕೈಟಭ, ರಕ್ತಬೀಜ, ಧೂಮ್ರಾಕ್ಷ, ಚಂಡ-ಮುಂಡ, ಶುಂಭ-ನಿಶುಂಭ ಹೀಗೆ ಎಲ್ಲ ಅಸುರರೂ ನಮ್ಮ ಮನದಲ್ಲೇ ಸೃಷ್ಟಿಯಾಗುತ್ತಾರೆ.
ಶ್ರೀದೇವೀ ಲಲಿತೋಪಾಖ್ಯಾನದಲ್ಲಿ ಭಂಡಾಸುರ ಹಾಗೂ ಶ್ರೀಲಲಿತೆಯ ನಡುವಿನ ಯುದ್ಧದ ಸುಂದರ ಚಿತ್ರಣವನ್ನು ಮನನ ಮಾಡಬೇಕಿದೆ. ಅಲ್ಲಿನ ಭಾವವನ್ನು ಗಮನಿಸಬೇಕಿದೆ. ಜೀವ ಜೀವರಿಗೆ ಶ್ರೀಲಲಿತೆ ಕೊಟ್ಟಿರುವ ಸಂದೇಶವನ್ನು ಅರ್ಥೈಸಿಕೊಳ್ಳಬೇಕಿದೆ.
ಆರಂಭದಲ್ಲಿ ಅತೀವ ಭಕ್ತಿಯನ್ನು ಪ್ರದರ್ಶಿಸುವ ಭಂಡಾಸುರನಲ್ಲಿ ಷಡ್ವೈರಿಗಳು ಮನೆ ಮಾಡುತ್ತವೆ. ಪ್ರಥಮ ಪೂಜ್ಯ ಗಣೇಶನ ಭಕ್ತಿ ಮಾಡುತ್ತಾ ಗಣೇಶನನ್ನೇ ಸಂದಿಗ್ಧದಲ್ಲಿ ಸಿಲುಕಿಸುತ್ತಾನೆ ಭಂಡಾಸುರ. ತನ್ನ ಸ್ವಾರ್ಥ ಸಾಧನೆಗಾಗಿ, ತನ್ನ ಅರಮನೆಯಲ್ಲೇ ಗಣೇಶ ನೆಲೆಯಾಗಬೇಕೆಂದು ತಾನು ಕೊಡುವಷ್ಟು ಮೋದಕಗಳನ್ನು ತಿನ್ನುತ್ತಲೇ ಇರಬೇಕೆಂಬ ವಚನಕ್ಕೆ ಪ್ರಥಮಪೂಜ್ಯನನ್ನು ಸಿಲುಕಿಸುತ್ತಾನೆ.
ಲಂಬೋದರನನ್ನು ಅಲ್ಪಮೋದಕದಿಂದ ತೃಪ್ತಿಪಡಿಸಲು ಸಾಧ್ಯವೇ. ಹಾಗಾಗಿ ಸೂರ್ಯನಿಂದ ಅಕ್ಷಯಪಾತ್ರೆಯನ್ನು ಬಲವಂತವಾಗಿ ಪಡೆದು ಅದರಲ್ಲಿ ಮೋದಕ ನೀಡುತ್ತಾನೆ. ಅಕ್ಷಯಪಾತ್ರೆಯಲ್ಲಿ ಮೋದಕ ಖಾಲಿಯಾಗದು, ಗಣೇಶ ವಚನ ಬಿಡನು. ಹೀಗಾಗಿ ಭಂಡಾಸುರನನ್ನು ಸೋಲಿಸುವುದು ಕಷ್ಟವಾಗುತ್ತದೆ. ಗಣೇಶನ ವಾಹನ ಮೂಷಿಕ ಅಕ್ಷಯಪಾತ್ರೆಯನ್ನು ಎಂಜಲು ಮಾಡಿದಾಗ ಮೋದಕ ಖಾಲಿಯಾಗುತ್ತದೆ. ಅಕ್ಷಯಪಾತ್ರೆ ತನ್ನ ಮಹತ್ವ ಕಳೆದುಕೊಳ್ಳುತ್ತದೆ. ಆದರೆ ಅಷ್ಟರಲ್ಲಾಗಲೇ ಭಂಡಾಸುರನು ಗಣೇಶನಿಂದ ವಿಘ್ನಕಾರಕ ಯಂತ್ರವನ್ನು ಪಡೆದುಕೊಂಡು ದೇವಿಯ ಸೈನ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿರುತ್ತಾನೆ. ಭಂಡಾಸುರನಿಗೆ ನೀಡಿದ ವಚನದಿಂದ ಮುಕ್ತನಾದ ಗಣೇಶ ತಾನೇ ಕೊಟ್ಟ ವಿಘ್ನಕಾರಕ ಯಂತ್ರವನ್ನು ನಾಶಮಾಡಿ ವಿಘ್ನನಿವಾರಕನಾಗಿ ಮೆರೆಯುತ್ತಾನೆ.
ಮಹಾಗಣೇಶನಿರ್ಭಿನ್ನವಿಘ್ನಯಂತ್ರಪ್ರಹರ್ಷಿತಾ… |
ಜೀವಜೀವರಲ್ಲೂ ಹೀಗೆಯೇ. ಷಡ್ವೈರಿಗಳ ಪ್ರಭಾವ ತೀವ್ರಗೊಂಡಾಗ ನಮ್ಮೊಳಗಿನ ಆತ್ಮರೂಪಿ ಶ್ರೀಲಲಿತೆಯನ್ನು ಸಂಕಷ್ಟಕ್ಕೆ ಸಿಲುಕಿಸುತ್ತಲೇ ಇರುತ್ತೇವೆ. ವಿಕಾರಗಳ ಪ್ರಭಾವಕ್ಕೊಳಗಾಗಿ, ಮತಿ ಮಂದವಾಗಿ, ಅಲ್ಪವಿವೇಕವನ್ನೂ ಕಳೆದುಕೊಂಡು ಭಂಡತನ ಮೆರೆಯುತ್ತೇವೆ. ಮೂಲಾಧಾರಾದಿ ಚಕ್ರಗಳನ್ನು ಜಾಗೃತಿಸಿ, ಷಡ್ವೈರಿಗಳನ್ನು ಮೆಟ್ಟಿನಿಲ್ಲಬೇಕೆಂಬುದೇ ಜೀವ ಜೀವರಿಗೆ ಶ್ರೀಲಲಿತೆಯ ಸಂದೇಶ.
ಭಂಡಾಸುರ ಅಸುರಮಹಾಸ್ತ್ರವನ್ನು ಸಂಪಾದಿಸಿಕೊಂಡು ಹಿಂದಿನ ಜನ್ಮಗಳಲ್ಲಿ, ಹಿಂದಿನ ಯುಗಗಳಲ್ಲಿ ಅಳಿದ ಅಸುರರಿಗೆ ಮರುಜೀವ ಕೊಡುತ್ತಾನೆ. ಮಧು-ಕೈಟಭ, ಮಹಿಷಾಸುರ, ಧೂಮ್ರಾಕ್ಷ, ಚಂಡ-ಮುಂಡ, ರಕ್ತಬೀಜ, ಶುಂಭ-ನಿಶುಂಭಾದಿ ರಾಕ್ಷಸರನ್ನು ತಾನು ಮೊದಲು ಸಂಹರಿಸಿದಂತೆಯೇ ಸಂಹರಿಸುತ್ತಾಳೆ ಶ್ರೀಲಲಿತೆ. ಅತಿಬುದ್ಧಿವಂತಿಕೆ ಪ್ರದರ್ಶಿಸುವ ಭಂಡಾಸುರ ಶ್ರೀಹರಿ ನಾರಾಯಣನಿಂದ ಹತರಾದ ಅಸುರರಿಗೆ ಮರುಜೀವ ತುಂಬುತ್ತಾನೆ. ಶ್ರೀಲಲಿತೆಯ ಸೈನ್ಯ ತಬ್ಬಿಬ್ಬಾಗುತ್ತದೆ.
ಕರಾಂಗುಲಿನಖೋತ್ಪನ್ನನಾರಾಯಣದಶಾಕೃತಿಃ |
ಶ್ರೀಲಲಿತೆಯು ತನ್ನ ತೋರುಬೆರಳಿನ ಉಗುರಿನಿಂದ ನಾರಾಯಣನ ಅವತಾರಗಳನ್ನು ಸೃಜಿಸಿ ಅಸುರರ ಸಂಹರಿಸುತ್ತಾಳೆ. ಜೀವ ಜೀವರ ಜೀವನದಲ್ಲಿ ಷಡ್ವೈರಿಗಳ ಪ್ರಭಾವದಿಂದ ಆಸುರೀ ಪ್ರವೃತ್ತಿ ಮೈದಳೆದಾಗ ಅವಗಳನ್ನು ನಿರ್ನಾಮ ಮಾಡಿದಲ್ಲಿ ಬ್ರಹ್ಮಸಾಕ್ಷಾತ್ಕಾರವಾದೀತೆಂಬ ಸ್ಪಷ್ಟ ಸಂದೇಶ ಆದಿಶಕ್ತಿಯದ್ದು.
ಮನಸು ಮೃಗವಾದಾಗ ಆತ್ಮ ಮಹಿಷಮರ್ದಿನಿಯಾಗಬೇಕು. ಮನ ಚಂಡ-ಮುಂಡರಂತೆ ದುರುಳಗೊಂಡಾಗ ಆತ್ಮ ಚಾಮುಂಡಿಯಾಗಬೇಕು. ಮನ ಎಲ್ಲೆಲ್ಲೂ ವಿಷಬೀಜ ಬಿತ್ತುತ್ತಾ ರಕ್ತಬೀಜನಂತಾದಾಗ ಆತ್ಮ ರಕ್ತೇಶ್ವರಿಯಾಗಿ, ಮಹಾಕಾಳಿಯಾಗಬೇಕು.
ಮನಸ್ಸು ಶುಂಭ-ನಿಶುಂಭರಂತೆ ಹುಂಬತನ ಪ್ರದರ್ಶಿಸಿದಾಗ ಆತ್ಮ ಶಾಂಭವಿಯಾಗಬೇಕು. ಮನದಲ್ಲಿ ಕಾರ್ತವೀರ್ಯನಂಥ ಕ್ರೌರ್ಯ ಮನೆಮಾಡಿದಾಗ ಆತ್ಮ ಪರಶುರಾಮನಾಗಬೇಕು. ಮನದಲ್ಲಿ ಹಿರಣ್ಯಾಕ್ಷನಂತೆ ಕಾಮ ನೆಲೆಯಾದಾಗ ಆತ್ಮ ಶ್ವೇತವರಾಹನಾಗಬೇಕು, ಹಿರಣ್ಯಕಶಿಪುವಿನಂತೆ ಮದವೇರಿದಾಗ ಆತ್ಮ ನರಸಿಂಹನಾಗಬೇಕು. ಮೋಹ, ಕಪಟಗಳು ಮನದಲ್ಲಿ ನೆಲೆಯಾಗಿ ರಾವಣನಂತಾದಾಗ ಆತ್ಮ ರಾಮನಾಗಬೇಕು. ಷಡ್ವೈರಿಗಳೆಲ್ಲವೂ ಒಟ್ಟಾಗಿ, ತಾರಕಕ್ಕೇರಿ, ಮನದಲ್ಲಿ ಭಂಡತನ ಮನೆಮಾಡಿ, ಭಂಡಾಸುರನಾದಾಗ ಆತ್ಮ ಶ್ರೀಲಲಿತೆಯಾಗಬೇಕು.
ಯಾ ದೇವೀ ಸರ್ವಭೂತೇಷು ಚೇತನೇತ್ಯಭಿಧೀಯತೇ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಮನಸನ್ನು, ಜೀವಜೀವರೊಳಗಿನ ಷಡ್ವೈರಿಗಳನ್ನು ನಿಯಂತ್ರಿಸಿ ಆತ್ಮಜ್ಯೋತಿಯನ್ನು ಬೆಳಗಬೇಕಾದರೆ ಬುದ್ಧಿ ಪ್ರಬಲವಾಗಬೇಕು. ಬುದ್ಧಿಯ ಕೆಲಸಕ್ಕಿರುವ ವಿಘ್ನಗಳು ನಿವಾರಣೆಯಾಗಬೇಕು. ಅದಕ್ಕಾಗಿ ಬುದ್ಧಿಯಲ್ಲಿ ಬುದ್ಧಿಯ ದೇವತೆ, ವಿಘ್ನನಿವಾರಕ ಶ್ರೀಗಣೇಶ ನೆಲೆಯಾಗಬೇಕು.
ನಮ್ಮೊಳಗಿನ ಅಸುರರ ನಾಶ ಮಾಡುವ ಸಂಕಲ್ಪ ಮಾಡೋಣ. ಶ್ರೀಲಲಿತೆಯ ವೈಭವವನ್ನು ಅರಿತು, ಆತ್ಮಜ್ಯೋತಿಯನ್ನು ಬೆಳಗೋಣ.