ಮನೆ ರಾಜ್ಯ ಸಚಿವ ಬಿ.ಸಿ.ನಾಗೇಶ್‌ ಮನೆಗೆ ಮುತ್ತಿಗೆ, ಬೆಂಕಿ ಹಚ್ಚಲು ಯತ್ನ: ಸಿಎಂ ಬೊಮ್ಮಾಯಿ ಖಂಡನೆ

ಸಚಿವ ಬಿ.ಸಿ.ನಾಗೇಶ್‌ ಮನೆಗೆ ಮುತ್ತಿಗೆ, ಬೆಂಕಿ ಹಚ್ಚಲು ಯತ್ನ: ಸಿಎಂ ಬೊಮ್ಮಾಯಿ ಖಂಡನೆ

0

ತುಮಕೂರು (Tumakuru): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ (B.C.Nagesh) ಮನೆ ಮುಂಭಾಗ ಪ್ರತಿಭಟನೆ ನಡೆಸಿ, ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ತಿಪಟೂರಿನಲ್ಲಿ ನಡೆದಿದೆ.

ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹಾಗೂ ಸಚಿವ ಬಿ.ಸಿ.ನಾಗೇಶ್ ಅವರು ಪಠ್ಯಪುಸ್ತಕದಲ್ಲಿ ಆರ್ ಎಸ್ ಎಸ್ ನೀತಿ ಅಳವಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮನೆಗೆ ಮುತ್ತಿಗೆ ಹಾಕಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಹೊರಗಿನಿಂದ ಬಂದವರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ 5 ಮಂದಿ, ಭದ್ರಾವತಿಯ 1, ಚಿಕ್ಕಮಗಳೂರಿನ 2, ದಾವಣಗೆರೆ 3, ತುಮಕೂರು ಒಬ್ಬರು ಸೇರಿದಂತೆ 15 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರಿನ ಮನೆಯ ಆವರಣಕ್ಕೆ ನುಗ್ಗಿ NSUI ಕಾರ್ಯಕರ್ತರು ಪ್ರತಿಭಟನೆ ಮಾಡಿ ದಾಂಧಲೆ ನಡೆಸಿರುವುದು ಖಂಡನೀಯ. ಇಂತಹ ನಡೆ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ ಶೋಭೆ ತರುವುದಿಲ್ಲ. ಈ ಕುಕೃತ್ಯ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇನ್ನು ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra) ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಗೂಂಡಾ ವರ್ತನೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಚಿವ ನಾಗೇಶ್ ಮನೆ ಮುಂದೆ ಕಾಂಗ್ರೆಸ್‌, ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಮಯದಲ್ಲಿ ಮನೆಗೆ ನುಗ್ಗಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ. ಒಂದಷ್ಟು ಬಟ್ಟೆಗಳಷ್ಟೇ ಸುಟ್ಟಿದೆ. ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಗೂಂಡಾ ವರ್ತನೆ ತೋರಿದವರನ್ನು ಸುಮ್ಮನೆ ಬಿಡುವುದಿಲ್ಲ. ಮುಂದೆ ಇಂತಹ ಘಟನೆಗಳು ನಡೆಯಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.