ಮನೆ ರಾಜ್ಯ ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ: ಮತ್ತೆ ಮೂವರ ಬಂಧನ

ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣ: ಮತ್ತೆ ಮೂವರ ಬಂಧನ

0

ಕಲಬುರಗಿ (Kalaburgi): ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ಸಹಚರರಾದ ಮೂವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಆರ್‌.ಡಿ. ಪಾಟೀಲ ಸೋದರಳಿಯ ಆಳಂದ ತಾಲ್ಲೂಕಿನ ಜಾವಳಿ (ಡಿ) ಗ್ರಾಮದ ಪ್ರಕಾಶ ಬಸವರಾಜ ಉಡಗಿ, ಅಫಜಲಪುರ ತಾಲ್ಲೂಕು ಮಣೂರ ಗ್ರಾಮದ ಅಸ್ಲಂ ಸೈಫುನ್ ಮುಲ್ಕ್ ಮುಜಾವರ ಹಾಗೂ ಮುನಾಫ್ ಜಮಾದಾರ ಬಂಧಿತರು.

ಇವರು ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಿ, ಅಭ್ಯರ್ಥಿಗಳಿಗೆ ಉತ್ತರ ತಲುಪಿಸುವ ಕಾರ್ಯವನ್ನು ಮಾಡುತ್ತಿದ್ದರು.

ಧಾರವಾಡದ ಸಾಮಾಜಿಕ ಹೋರಾಟಗಾರ ರವಿಶಂಕರ್ ಎಂಬುವವರಿಗೆ ಅಸ್ಲಂ ಮುಜಾವರ ವಾಟ್ಸ‌್ ಆ್ಯಪ್‌ನಲ್ಲಿ ಬೆದರಿಕೆ ಹಾಕಿದ್ದ. ಈ ಬಗ್ಗೆ ರವಿಶಂಕರ್ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

‘ನಮ್ಮ ಗೌಡರ (ಆರ್‌.ಡಿ.ಪಾಟೀಲ) ತಂಟೆಗೆ ಬಂದರೆ ನಿನ್ನನ್ನು ಮುಗಿಸುತ್ತೇವೆ. ಅಫಜಲಪುರದ ಪವರ್ ಏನು ಎಂಬುದು ತೋರಿಸುತ್ತೇವೆ’ ಎಂದು ವಾಟ್ಸ್‌ಆ್ಯಪ್‌ನಲ್ಲಿ ಬೆದರಿಕೆ ಹಾಕಿದ್ದ. ವಾಟ್ಸ್‌ಆ್ಯಪ್ ಬೆದರಿಕೆಯ ವಿವರಗಳನ್ನು ಸಿಐಡಿ ಅಧಿಕಾರಿಗಳಿಗೆ ಕಳುಹಿಸಿದ್ದರು.

ಪಿಎಸ್‌ಐ ಪ್ರಕರಣ ಬೆಳಕಿಗೆ ಬಂದಾಗಿನಿಂದಲೇ ಇವರ ಹುಡುಕಾಟದಲ್ಲಿದ್ದ ಸಿಐಡಿ ತನಿಖಾಧಿಕಾರಿಗಳಾದ ಪ್ರಕಾಶ ರಾಠೋಡ, ವೀರೇಂದ್ರ ಹಾಗೂ ಶಂಕರಗೌಡ ಪಾಟೀಲ ನೇತೃತ್ವದ ತಂಡವು ಮೂವರನ್ನೂ ಬಂಧಿಸಿದೆ.

ಹಿಂದಿನ ಲೇಖನಸಚಿವ ಬಿ.ಸಿ.ನಾಗೇಶ್‌ ಮನೆಗೆ ಮುತ್ತಿಗೆ, ಬೆಂಕಿ ಹಚ್ಚಲು ಯತ್ನ: ಸಿಎಂ ಬೊಮ್ಮಾಯಿ ಖಂಡನೆ
ಮುಂದಿನ ಲೇಖನಮಹೇಂದ್ರ ಸಿಂಗ್ ಧೋನಿ ವಿರುದ್ಧ ಎಫ್‌ಐಆರ್‌