ಮನೆ ಅಪರಾಧ ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದು ಕೊಲೆಗೆ ಯತ್ನ: ಮೂವರು ದರೋಡೆಕೋರರ ಬಂಧನ, ಇಬ್ಬರು ಪರಾರಿ

ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದು ಕೊಲೆಗೆ ಯತ್ನ: ಮೂವರು ದರೋಡೆಕೋರರ ಬಂಧನ, ಇಬ್ಬರು ಪರಾರಿ

0

ಲಿಂಗಸುಗೂರು (ರಾಯಚೂರು ಜಿಲ್ಲೆ): ದರೋಡೆಕೋರರ ತಂಡವೊಂದು ತಮ್ಮನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೆಯೇ ವಾಹನ ಹಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಪಟ್ಟಣದ ಕಲಬುರ್ಗಿರಸ್ತೆಯಲ್ಲಿ ನಡೆದಿದೆ.

Join Our Whatsapp Group

ಶುಕ್ರವಾರ ರಾತ್ರಿ ತಿಂಥಣಿ ಬ್ರಿಡ್ಜ್ ದಿಂದ ಲಿಂಗಸುಗೂರು ಕಡೆಗೆ ದರೋಡೆಕೋರರ ತಂಡವೊಂದು ಸ್ಕಾರ್ಪಿಯೊ ವಾಹನದಲ್ಲಿ ತೆರಳುತ್ತಿರುವ ಮಾಹಿತಿ ದೊರೆತ ತಕ್ಷಣ ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲಿಕ ಪಟತ್ತರ ನೇತೃತ್ವದ ಪೊಲೀಸರು ದರೋಡೆಕೋರರ  ಬಂಧನಕ್ಕೆ ಬಲೆ ಬೀಸಿದ್ದರು.

ಆದರೆ, ಮಾಣಿಕೇಶ್ವರಿ ಮಠದ ಬಳಿ ಆರೋಪಿತರು ಪೊಲೀಸ್ ಸಿಬ್ಬಂದಿ ವಾಹನದ ಮೇಲೆ ಹಾಯಿಸಿ  ಪರಾರಿಯಾಗಲು ಯತ್ನಿಸಿದರು. ನಂತರ ಬಸವಸಾಗರ ವೃತ್ತದಲ್ಲಿ  ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ದರೋಡೆಕೋರರಿದ್ದ ವಾಹನವು ಪೊಲೀಸ್ ಜೀಪ್ ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದವರು ಖಾರದಪುಡಿ, ರಾಡ್, ಮಚ್ಚುಗಳಿಂದ ಪೊಲೀಸರ  ಮೇಲೆ ಹಲ್ಲೆಗೆ ಯತ್ನಿಸಿದರು. ಎರಡೂ ತಂಡಗಳ ಮಧ್ಯೆ ನಡೆದ ಜಟಾಪಟಿಯಲ್ಲಿ ಪೊಲೀಸರು ಪ್ರಯಾಸಪಟ್ಟು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇಬ್ಬರು ಪರಾರಿ ಆಗಿದ್ದಾರೆ.

ಬಂಧಿತರನ್ನು ಗುರುರಾಜ ಸುರೇಶ ಚವ್ಹಾಣ ಯಾದಗಿರಿ, ಕುಮಾರ ಯಮನಪ್ಪ ಚವ್ಹಾಣ ಕನ್ಯಾಕೋಳೂರುತಾಂಡಾ, ಸುರೇಶ ಪೂಲಸಿಂಗ್ ರಾಠೋಡ ಜಿನಕೇರಿತಾಂಡಾ ಎಂದು ಗುರುತಿಸಲಾಗಿದೆ. ತಿಪ್ಪಣ್ಣ ಚಂದಪ್ಪ ರಾಠೋಡ ಮತ್ತು ಮಾನಪ್ಪ ಓಂ ರಾಠೋಡ  ಕನ್ಯಾಕೋಳೂರುತಾಂಡ ಪರಾರಿಯಾಗಿದ್ದು, ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ.

ದರೋಡೆಕೋರರಿಂದ ಹಲ್ಲೆಗೊಳಗಾದ, ಪೊಲೀಸರಿಗೆ ಸಹಕಾರ ನೀಡಿದ ಸ್ಥಳೀಯರಾದ ವೀರೇಶ ಮುದಿಯಪ್ಪ ಭಜಂತ್ರಿ, ನಾರಾಯಣ ಹನುಮಂತ ಕ್ಷತ್ರೀಯ, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ರಂಗನಾಥ ಹೊನ್ನಪ್ಪ, ಸಿದ್ದಪ್ಪ ಮಾನಪ್ಪ, ಶರಣಬಸವ ಸಾಬಣ್ಣ   ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲಿಕ್ ಪಟತ್ತರ ನೀಡಿದ ದೂರಿನ ಅನ್ವಯ ಪಿಎಸ್ಐ ರತ್ನಮ್ಮ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹರೀಶ ಬಾಬು, ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ, ಸಿಪಿಐಗಳಾದ ಹೊಸಕೇರಪ್ಪ ಹಟ್ಟಿ, ಬಾಲಚಂದ್ರ ಡಿ. ಲಕ್ಕಂ ಮಸ್ಕಿ, ಪಿಎಸ್ಐ ವೆಂಕಟೇಶ ಮುದಗಲ್ಲ ಅವರು ಪರಾರಿಯಾದ ಆರೋಪಿತರ ಶೋಧ ಕಾರ್ಯ ನಡೆಸಿದ್ದಾರೆ.