ಮನೆ ಕಾನೂನು ಪೊಲೀಸ್ ಠಾಣೆಯಲ್ಲಿ ಸಂಭಾಷಣೆಯ ಧ್ವನಿ ಮುದ್ರಣ ಅಧಿಕೃತ ರಹಸ್ಯ ಕಾಯಿದೆಯಡಿ ಅಪರಾಧವಲ್ಲ: ಬಾಂಬೆ ಹೈಕೋರ್ಟ್

ಪೊಲೀಸ್ ಠಾಣೆಯಲ್ಲಿ ಸಂಭಾಷಣೆಯ ಧ್ವನಿ ಮುದ್ರಣ ಅಧಿಕೃತ ರಹಸ್ಯ ಕಾಯಿದೆಯಡಿ ಅಪರಾಧವಲ್ಲ: ಬಾಂಬೆ ಹೈಕೋರ್ಟ್

0

ಪೊಲೀಸ್ ಠಾಣೆಯೊಳಗೆ ಸಂಭಾಷಣೆ ಧ್ವನಿ ಮುದ್ರಿಸಿಕೊಳ್ಳುವುದು ಅಧಿಕೃತ ರಹಸ್ಯ ಕಾಯಿದೆಯಡಿ ಅಪರಾಧವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಔರಂಗಾಬಾದ್ ಪೀಠ ಇತ್ತೀಚೆಗೆ  ತೀರ್ಪು ನೀಡಿದೆ.

Join Our Whatsapp Group

ಹೀಗಾಗಿ ಐಪಿಸಿ ಸೆಕ್ಷನ್‌ಗಳಡಿ ಮಹಾರಾಷ್ಟ್ರದ ಪಥರ್ಡಿ ಊರಿನವರಾದ ಇಬ್ಬರು ಸಹೋದರರ ವಿರುದ್ಧ ಕ್ರಿಮಿನಲ್‌ ಪಿತೂರಿಯ ಆರೋಪಗಳನ್ನು ರದ್ದುಗೊಳಿಸದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಎಸ್‌ ಜಿ ಚಾಪಲ್‌ಗಾಂವ್ಕರ್ ಅವರನ್ನೊಳಗೊಂಡ ಪೀಠ ಗೂಢಚರ್ಯದ ಆರೋಪಗಳನ್ನು ರದ್ದುಗೊಳಿಸಿತು.

ಅಧಿಕೃತ ರಹಸ್ಯ ಕಾಯಿದೆ 1923ರ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಕಾಯಿದೆಯ ಸೆಕ್ಷನ್‌ 2 (8)ರ ಪ್ರಕಾರ ಪೊಲೀಸ್‌ ಠಾಣೆ ನಿಷೇಧಿತ ಸ್ಥಳ ಅಲ್ಲ. ಅಲ್ಲದೆ ಇದೇ ಕಾಯಿದೆಯ ಸೆಕ್ಷನ್‌ 3 ಗೂಢಚಾರಿಕೆಗೆ ದಂಡ ವಿಧಿಸುತ್ತದಾದರೂ ಪೊಲೀಸ್‌ ಠಾಣೆಯಲ್ಲಿ ಮಾಡುವ ಎಲ್ಲವನ್ನೂ ಈ ಸೆಕ್ಷನ್ನಿನಡಿ ಸಂಪೂರ್ಣವಾಗಿ ಸೇರಿಸಿಲ್ಲ. ಹೀಗಿರುವಾಗ ಈ ಸೆಕ್ಷನ್‌ನ ಅಂಶಗಳು ಅನ್ವಯವಾಗದು ಎಂದ ಪೀಠ ಕಾಯಿದೆ ಅಡಿಯಲ್ಲಿರುವ ಆರೋಪಗಳು ಆಧಾರರಹಿತವಾಗಿವೆ ಎಂಬುದಾಗಿ ಸೂಚಿಸಿತು.

ಅಠಾರೆ ಸಹೋದರರ ಮನೆಗೆ ನುಗ್ಗಿದ ಮೂವರು ಅಪರಿಚಿತ ವ್ಯಕ್ತಿಗಳು ತಮ್ಮ ತಾಯಿಯ ಮೇಲೆ ಹಲ್ಲೆ ನಡೆಸಿದ್ದರು. ಆದರೆ  ತಮ್ಮ ದೂರನ್ನು ಅಸಂಜ್ಞೇಯ ಅಪರಾಧ ಎಂದು ದಾಖಲಿಸಿಕೊಂಡಿದ್ದಕ್ಕೆ ಸಹೋದರರು ಪೊಲೀಸರ ವಿರುದ್ಧ ಸಿಟ್ಟಿಗೆದ್ದಿದ್ದರು. ಠಾಣಾಧಿಕಾರಿಯೊಡನೆ ಈ ಸಂಬಂಧ ವಾಗ್ವಾದ ನಡೆದಾಗ ಸಹೋದರರಲ್ಲಿ ಒಬ್ಬಾತ ಆ ಸಂಭಾಷಣೆಯನ್ನು ಧ್ವನಿಮುದ್ರಿಸಿಕೊಂಡಿದ್ದರು.,  ಈ ಹಿನ್ನೆಲೆಯಲ್ಲಿ ಸಹೋದರರಾದ ಸುಭಾಷ್ ಮತ್ತು ಸಂತೋಷ್ ರಾಂಭಾವು ಅಠಾರೆ ಅವರ ವಿರುದ್ಧ ಐಪಿಸಿಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 506 (ಬೆದರಿಕೆ) ಹಾಗೂ ಅಧಿಕೃತ ರಹಸ್ಯ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಅಲ್ಲದೆ ಪರಿಶಿಷ್ಟ ಜಾತಿ ಮತ್ತ ಪಂಗಡಗಳ (ದೌರ್ಜನ್ಯ ನಿಷೇಧ) ಕಾಯಿದೆ ಅಡಿಯೂ ಪ್ರಕರಣ ದಾಖಲಿಸಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು ಎಂದು ಸಹೋದರರು ಆರೋಪಿಸಿದ್ದರು. ಪೊಲೀಸ್‌ ಮಹಾನಿರ್ದೇಶಕರಿಗೂ ಧ್ವನಿ ಮುದ್ರಣದ ಪ್ರತಿಯನ್ನು ಕಳಿಸಿಕೊಟ್ಟಿದ್ದರು. ಆ ಬಳಿಕವೂ ಸಹೋದರರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.

ಆದರೆ ಎಫ್‌ಐಆರ್‌ ಪ್ರತೀಕಾರದ ಕ್ರಮವಾಗಿದ್ದು ಕಟ್ಟುಕತೆಗಳಿಂದ ಕೂಡಿದೆ. ಆದ್ದರಿಂದ ಅದನ್ನು ರದ್ದುಗೊಳಿಸಬೇಕು ಎಂದು ಸಹೋದರರ ಪರ ವಕೀಲರು ವಾದಿಸಿದ್ದರು.

ಇದಕ್ಕೆ ವ್ಯತಿರಿಕ್ತ ವಾದ ಮಂಡಿಸಿದ ಪ್ರಾಸಿಕ್ಯೂಷನ್‌, ಸಹೋದರರ ವಾಗ್ವಾದ ಪೊಲೀಸ್‌ ಸಿಬ್ಬಂದಿಯನ್ನು ಬೆದರಿಸುವಂತಿದೆ. ಅಲ್ಲದೆ ಸ್ವತಃ ಪೊಲೀಸ್‌ ಅಧಿಕಾರಿಯಾಗಿರುವ ಸುಭಾಷ್‌ ತಮ್ಮ ಸಹೋದರನ ವಿರುದ್ಧದ ಆರೋಪಗಳನ್ನು ಸಮರ್ಥಿಸಿಕೊಂಡಿದ್ದಾರೆ ಎಂದಿತ್ತು.

ವಾದ ಆಲಿಸಿದ ನ್ಯಾಯಾಲಯ ಸಹೋದರರ ವಿರುದ್ಧ ಅಧಿಕೃತ ರಹಸ್ಯ ಕಾಯಿದೆಯಡಿಯ ಆರೋಪ ರದ್ದುಗೊಳಿಸಿತು. ಆದರೆ ಐಪಿಸಿಯಡಿಯ ಆರೋಪಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಅಗತ್ಯವಿದೆಯೇ ಎಂಬ ಕುರಿತು ನಿರ್ಧರಿಸುವಂತೆ ಕೆಳ ನ್ಯಾಯಾಲಯಕ್ಕೆ ಸೂಚಿಸಿತು.