ಮಾಟ, ಮಂತ್ರ, ಕ್ಷುದ್ರ ಶಕ್ತಿಗಳ ಆವಾಹನೆ, ಆ ಮೂಲಕ ಶತ್ರು ಸಂಹಾರ… ಇಂತಹ ಫ್ಯಾಂಟಸಿ ಕಥೆ, ಸಿನಿಮಾಗಳನ್ನು ಇಷ್ಟಪಡುವ, ಸೀಟಿನ ತುದಿಯಲ್ಲಿ ಕುಳಿತು ನೋಡುವ ದೊಡ್ಡ ಪ್ರೇಕ್ಷಕ ವರ್ಗವೇ ಇದೆ. ಆದರೆ, ಇಂತಹ ಕಥೆಗಳಿಗೆ ಮುಖ್ಯವಾಗಿ ಬೇಕಾಗಿರೋದು ಕ್ಷಣ ಕ್ಷಣ ಕುತೂಹಲ ಹೆಚ್ಚಿಸುತ್ತಾ ಸಾಗುವ ಗುಣ. ನಿರ್ದೇಶಕ ಸುನಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಸಿನಿಮಾ “ಅವತಾರ ಪುರುಷ-2′.
ಈ ಚಿತ್ರದ ಮೊದಲ ಭಾಗ ನೋಡಿದವರಿಗೆ ಕಾಮಿಡಿ ಜೊತೆಗೆ “ಬಿಸ್ತ’ ಎಂಬ ಬ್ಲ್ಯಾಕ್ ಮ್ಯಾಜಿಕ್‌ನ ಲೋಕವನ್ನು ಸ್ವಲ್ಪ ಮಟ್ಟಿಗೆ ತೋರಿಸಿದ್ದರು. ಆದರೆ, ಈಗ “ಅವತಾರ ಪುರುಷ-2’ನಲ್ಲಿ ಪೂರ್ಣ ಪ್ರಮಾಣದಲ್ಲಿ ಆ ಲೋಕವನ್ನು ತೆರೆದಿಟ್ಟಿದ್ದಾರೆ. ಈ ಚಿತ್ರದ ನಾಯಕ ಶರಣ್ ಆದರೂ ಇಲ್ಲಿ ಕಾಮಿಡಿಗಿಂತ ಹೆಚ್ಚಾಗಿ ತಂತ್ರ-ಮಂತ್ರಗಳಿಗೆ ಮೊದಲ ಆದ್ಯತೆ ನೀಡಿದ್ದಾರೆ.
ನಿರ್ದೇಶಕ ಸುನಿ ಈ ಸಿನಿಮಾವನ್ನು ಸಿಕ್ಕಾಪಟ್ಟೆ ಸಾವಧಾನದಿಂದ ಕಟ್ಟಿಕೊಟ್ಟಿದ್ದಾರೆ. ಅದೇ ಕಾರಣದಿಂದ ಸಾಕಷ್ಟು ದೃಶ್ಯಗಳು, ಸನ್ನಿವೇಶಗಳು, ಎಲ್ಲಿಂದಲೋ ಇನ್ನೆಲ್ಲಿಗೋ ಸಂಬಂಧ ಕಲ್ಪಿಸುವ ಘಟನೆಗಳು ಬಂದು ಹೋಗುತ್ತವೆ. ಆದರೆ,
ಪ್ರೇಕ್ಷಕರು ಇವೆಲ್ಲವನ್ನು ತುಂಬಾ ಗಂಭೀರವಾಗಿ ಯೋಚಿಸುತ್ತಾ, ಲೆಕ್ಕ ಹಾಕುತ್ತಾ ನೋಡಿದರೆ ಸಿನಿಮಾದ ಸ್ವಾದ ಕಳೆದುಕೊಳ್ಳಬೇಕಾಬಹುದು. ಏಕೆಂದರೆ ಈ ಬ್ಲ್ಯಾಕ್ ಮ್ಯಾಜಿಕ್‌ನಲ್ಲಿ “ಲಾಜಿಕ್’ ಹುಡುಕುವ ಗೋಜಿಗೆ ಹೋಗಬಾರದು.
ತೆರೆಮೇಲೆ ಮಾಟ, ಮಂತ್ರ, ತ್ರಿಶಂಕು ಲೋಕ, ನರಕ ಯಾತನೆ, ಬಿಸ್ತದಲ್ಲಿ ಕಲಿಯುವ “ಕ್ಷುದ್ರ’ ವಿದ್ಯೆಗಳು, ನೋಡ ನೋಡುತ್ತಲೇ ಮಾಯವಾಗುವ ಪಾತ್ರಗಳು… ಹೀಗೆ ಸಿಕ್ಕಾಪಟ್ಟೆ ಅಂಶಗಳು ಬಂದು ಹೋಗುತ್ತವೆ. ಒಂದು ಪ್ರಯತ್ನವಾಗಿ “ಅವತಾರ ಪುರುಷ-2′ ಸಿನಿಮಾವನ್ನು ಮೆಚ್ಚಬಹುದು. ಆ ಮಟ್ಟಿನ ಸುನಿ ಶ್ರಮ ಎದ್ದು ಕಾಣುತ್ತದೆ. ಚಿತ್ರಕ್ಕೆ ಇನ್ನೊಂದಿಷ್ಟು ಸ್ಪಷ್ಟತೆ ಬೇಕಿತ್ತು ಎನಿಸದೆ ಇರದು.
ನಾಯಕ ಶರಣ್ ತಮ್ಮ ಕಾಮಿಡಿ ಕಮಾಲ್‌ಗಿಂತ “ಬ್ಲ್ಯಾಕ್ ಮ್ಯಾಜಿಕ್’ನಲ್ಲಿ ಮಿಂಚಿದ್ದಾರೆ. “ತ್ರಿಶಂಕು ಲೋಕ’ದ ಕನಸು ಕಂಡು ಅದನ್ನು ನನಸಾಗಿಸುವ ಹಾದಿಯಲ್ಲಿ ಅವರ ಅಭಿನಯ ಇಷ್ಟವಾಗುತ್ತದೆ. ನಾಯಕಿ ಆಶಿಕಾ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಅಶುತೋಶ್ ರಾಣ ಸೇರಿದಂತೆ ಅನೇಕರು ನಟಿಸಿದ್ದಾರೆ.