ಮನೆ ಕಾನೂನು ಸಾಮಾಜಿಕ ಮಾಧ್ಯಮದಲ್ಲಿ ಅಪ್ರಾಪ್ತ ವಯಸ್ಕರ ಸುರಕ್ಷತೆಗಾಗಿ ವರ್ಚುವಲ್ ಟಚ್ ಬಗ್ಗೆ ಅರಿವು ಮೂಡಿಸಬೇಕು: ದೆಹಲಿ ಹೈಕೋರ್ಟ್

ಸಾಮಾಜಿಕ ಮಾಧ್ಯಮದಲ್ಲಿ ಅಪ್ರಾಪ್ತ ವಯಸ್ಕರ ಸುರಕ್ಷತೆಗಾಗಿ ವರ್ಚುವಲ್ ಟಚ್ ಬಗ್ಗೆ ಅರಿವು ಮೂಡಿಸಬೇಕು: ದೆಹಲಿ ಹೈಕೋರ್ಟ್

0

ವರ್ಚುವಲ್ ಪ್ರಪಂಚದ ಬೆದರಿಕೆಗಳಿಂದ ಅಪ್ರಾಪ್ತ ಮಕ್ಕಳನ್ನು ರಕ್ಷಿಸಲು ಅವರಿಗೆ ಗುಡ್‌ ಟಚ್‌ (ಉತ್ತಮ ಭಾವನೆಯ ಸ್ಪರ್ಶ) ಬ್ಯಾಡ್‌ ಟಚ್‌ (ಕೆಟ್ಟ ಭಾವನೆಯ ಸ್ಪರ್ಶ) ಬಗ್ಗೆ ಹೇಳಿದರಷ್ಟೇ ಲೈಂಗಿಕ ಕಿರುಕುಳದ ಬಗ್ಗೆ ಅರಿವು ಮೂಡಿಸಿದಂತಾಗುವುದಿಲ್ಲ, ವರ್ಚುವಲ್‌ ಟಚ್‌ (ಅಂತರ್ಜಾಲದ ಸುರಕ್ಷಿತ ಬಳಕೆ) ಕುರಿತಾಗಿಯೂ ಹೇಳಿಕೊಡಬೇಕು ಎಂದು ದೆಹಲಿ ಹೈಕೋರ್ಟ್‌ ಈಚೆಗೆ ಹೇಳಿದೆ .

Join Our Whatsapp Group

ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಸುರಕ್ಷಿತ ಆನ್‌ಲೈನ್‌ ನಡಾವಳಿಯ ಬಗ್ಗೆ ತಿಳಿಸಲು ಅವರಿಗೆ ವರ್ಚುವಲ್‌ ಟಚ್‌ (ಅಂತರ್ಜಾಲದ ಸುರಕ್ಷಿತ ಬಳಕೆ) ಕುರಿತಂತೆ ಅರಿವು ಮೂಡಿಸಬೇಕು ಎಂದು ನ್ಯಾ. ಸ್ವರಣಾ ಕಾಂತ ಶರ್ಮಾ ಹೇಳಿದರು.

ಎಳೆಯರಿಗೆ ನೀಡುವ ‘ವರ್ಚುವಲ್‌ ಟಚ್‌’ ಶಿಕ್ಷಣವು ಆನ್‌ಲೈನ್‌ನಲ್ಲಿ ನಡೆಯುವ ದುರಾಕ್ರಮಣದ ಕುರಿತಾದ ಸಂಜ್ಞೆಗಳ ಗುರುತಿಸುವಿಕೆ, ಖಾಸಗಿತನವನ್ನು ಕಾಪಾಡಲು ಮಾಹಿತಿ ಹಂಚಿಕೆಯನ್ನು ಮಿತಿಗೊಳಿಸುವ ಪ್ರೈವೆಸಿ ಸೆಟ್ಟಿಂಗ್‌ ಬಗ್ಗೆ ತಿಳಿವಳಿಕೆಯನ್ನು ಒಳಗೊಳ್ಳುತ್ತದೆ. ಆನ್‌ಲೈನ್‌ ಮಿತಿಗಳ ಪ್ರಾಮುಖ್ಯತೆ ಅರ್ಥ ಮಾಡಿಸುತ್ತದೆ ಎಂದು ನ್ಯಾಯಾಲಯ ವಿವರಿಸಿತು.

ವರ್ಚುವಲ್‌ ಜಗತ್ತಿನಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನಿಡುವುದಕ್ಕಾಗಿ ಆನ್‌ಲೈನ್ ಸಂಪರ್ಕಗಳ ವಿಶ್ವಾಸಾರ್ಹತೆ ನಿರ್ಣಯಿಸಲು ಮತ್ತು ತಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿಕೊಳ್ಳುವಂತಹ ನಿರ್ಣಾಯಕ ಚಿಂತನೆಯ ಕೌಶಲ್ಯವನ್ನು ಅವರೊಳಗೆ ಬೆಳೆಸಲು ಯತ್ನಿಸಬೇಕು ಎಂದು ಏಕಸದಸ್ಯ ಪೀಠ ನುಡಿಯಿತು.

ಹೀಗಾಗಿ ವರ್ಚುವಲ್ ಟಚ್,  ಅದರ ಪರಿಣಾಮಗಳು ಹಾಗೂ ಅಪಾಯಗಳ ಬಗ್ಗೆ ಪಠ್ಯಕ್ರಮದಲ್ಲಿ ವಿಷಯವೊಂದನ್ನು ಅಳವಡಿಸಬೇಕು ಎಂದು ಸಂಬಂಧಪಟ್ಟವರಿಗೆ ಹೈಕೋರ್ಟ್‌ ತಿಳಿಸಿತು. 

‘ಗುಡ್’ ಮತ್ತು ‘ಬ್ಯಾಡ್ ಟಚ್’ ಎಂಬ ಸಾಂಪ್ರದಾಯಿಕ ಪರಿಕಲ್ಪನೆಗಳ ಮೇಲೆ ಮಾತ್ರವಲ್ಲದೆ ನವೀನ ಪರಿಕಲ್ಪನೆಯಾದ ‘ವರ್ಚುವಲ್ ಟಚ್’ ಮತ್ತು ಅದರ ಸಂಭಾವ್ಯ ಅಪಾಯಗಳ ಬಗ್ಗೆ ಕೂಡ ಕಾರ್ಯಕ್ರಮಗಳು, ಕಾರ್ಯಾಗಾರ, ಸಮ್ಮೇಳನಗಳನ್ನು ನಡೆಸಲು ಇದು ಸಕಾಲ ಎಂದು ಅದು ಹೇಳಿತು.

ವರ್ಚುವಲ್‌ ಜಗತ್ತು ಹದಿಹರೆಯದವರ ನಡುವೆ ನಡೆಯುತ್ತದೆ ಎನ್ನಲಾದ ವರ್ಚುವಲ್‌ ಪ್ರೀತಿಗೆ ಪ್ರಶಸ್ತವಾದ ತಾಣವಾಗಿದ್ದು ಅವರು ವೇಶ್ಯಾವಾಟಿಕೆ, ಮಾನವ ಕಳ್ಳಸಾಗಣೆ ಇನ್ನಿತರ ಸಂಭಾವ್ಯ ಅಪಾಯ ಎದುರಿಸಲು ಸಜ್ಜುಗೊಂಡಿಲ್ಲ ಎಂದು ನ್ಯಾಯಾಲಯ ಇದೇ ವೇಳೆ ಆತಂಕ ವ್ಯಕ್ತಪಡಿಸಿತು.

ರಾಜೀವ್ ಎಂಬ ವ್ಯಕ್ತಿಯ ತಾಯಿಯಾಗಿರುವ ಕಮಲೇಶ್ ದೇವಿ ಎಂಬ ಮಹಿಳೆ ತನ್ನ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನಗಳನ್ನು ಮಾಡಿತು. ಮಹಿಳೆಯು ಮಗ ಸಾಮಾಜಿಕ ಜಾಲತಾಣದ ಮೂಲಕ 16ರ ಹರೆಯದ ಅಪ್ರಾಪ್ತ ಬಾಲಕಿಯ ಜೊತೆ ಸ್ನೇಹ ಬೆಳೆಸಿ, ಆಕೆಯನ್ನು ಅಪಹರಿಸಿ ದಿನಗಟ್ಟಲೆ ಬಂಧನದಲ್ಲಿಟ್ಟಿದ್ದ. ಇದಕ್ಕೆ ತಾಯಿ ಸಹಕರಿಸಿದ್ದಳು ಎನ್ನುವ ಆರೋಪದ ಪ್ರಕರಣ ಇದಾಗಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಹಾಗೂ ಆಕೆಯನ್ನು 45ರ ವಯಸ್ಸಿನ ವ್ಯಕ್ತಿಯೊಂದಿಗೆ ಮದುವೆಯಾಗಲು ಮಾರಾಟ ಮಾಡಿದ ಆರೋಪ ಪ್ರಕರಣದಲ್ಲಿ ಕೇಳಿ ಬಂದಿದೆ. ನ್ಯಾಯಾಲಯ ಅಂತಿಮವಾಗಿ ಆರೋಪಿ ಮಹಿಳೆಗೆ ಜಾಮೀನು ನಿರಾಕರಿಸಿತು.

ಹಿಂದಿನ ಲೇಖನಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
ಮುಂದಿನ ಲೇಖನಬಿಟ್ ಕಾಯಿನ್ ಹಗರಣ: ಪ್ರಮುಖ ಆರೋಪಿ ಶ್ರೀಕಿ ಮತ್ತೆ ಬಂಧನ