ಮನೆ ಕಾನೂನು ಬಿ. ಎಸ್. ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್  ತಡೆಯಾಜ್ಞೆ

ಬಿ. ಎಸ್. ಯಡಿಯೂರಪ್ಪ ವಿರುದ್ಧದ ತನಿಖೆಗೆ ಸುಪ್ರೀಂಕೋರ್ಟ್  ತಡೆಯಾಜ್ಞೆ

0

ನವದೆಹಲಿ(Newdelhi): ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್‌ನ ತನಿಖೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠವು, ದೂರುದಾರರಾದ ಟಿ.ಜೆ. ಅಬ್ರಾಹಂ ಅವರಿಗೆ ನೋಟಿಸ್‌ ಜಾರಿ ಮಾಡಿದೆ.

ಯಡಿಯೂರಪ್ಪ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್‌ ರೊಹಟಗಿ ಹಾಗೂ ಸಿದ್ಧಾರ್ಥ ದವೆ ಅವರು, ಜನಪ್ರತಿನಿಧಿಗಳ ಮುನ್ನ ಎಫ್ಐಆರ್ ದಾಖಲಿಸುವ ಮುನ್ನ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂಬ ನಿಯಮವನ್ನು ಹೈಕೋರ್ಟ್‌ ನಿರ್ಲಕ್ಷ್ಯಿಸಿದೆ ಎಂದರು.

ಅಬ್ರಾಹಂ ಪರ ವಕೀಲರು, ಅಪರಾಧ ದಂಡ ಸಂಹಿತೆಯ ಸೆಕ್ಷನ್‌ 156 (3) ಅನ್ವಯ ದಾಖಲಾದ ದೂರುಗಳಿಗೆ ಪೂರ್ವಾನುಮತಿಯ ನಿಯಮ ಅನ್ವಯವಾಗುವುದಿಲ್ಲ ಎಂದು ಕಾನೂನಿನ ಇತ್ತೀಚಿನ ತಿದ್ದುಪಡಿ ತಿಳಿಸುತ್ತದೆ ಎಂದರು.

ಆಗ ನ್ಯಾಯಪೀಠ, ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿತು. ಬಿಡಿಎ ವಸತಿ ಯೋಜನೆಯೊಂದರ ಕಾಮಗಾರಿಯ ಗುತ್ತಿಗೆ ನೀಡಲು ಗುತ್ತಿಗೆದಾರರಿಂದ ಲಂಚ ಪಡೆದ ಆರೋಪದ ಮೇಲೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ಬಿ.ಎಸ್‌. ಯಡಿಯೂರಪ್ಪ, ಅವರ ಮಗ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲು ಹೈಕೋರ್ಟ್‌ ಸೂಚಿಸಿತ್ತು. ಲೋಕಾಯುಕ್ತ ಪೊಲೀಸರು ಕಳೆದ ಶುಕ್ರವಾರ ಎಫ್‌ಐಆರ್‌ ದಾಖಲಿಸಿದ್ದರು.

ಹಿಂದಿನ ಲೇಖನಹಿಂಸಾಚಾರ ತಡೆಗೆ ಅಗತ್ಯ ಕ್ರಮ ಕೈಗೊಳ್ಳಿ: ಸರ್ಕಾರಕ್ಕೆ ಕೇರಳ ಹೈಕೋರ್ಟ್  ಸೂಚನೆ
ಮುಂದಿನ ಲೇಖನಎಸ್’ಎಸ್’ಎಲ್’ಸಿ – ಪಿಯುಸಿ ಪರೀಕ್ಷಾ ಮಂಡಳಿಗಳ ವಿಲೀನ ವಿಧೇಯಕ: ವಿಧಾನಸಭೆಯಲ್ಲಿ ಅಂಗೀಕಾರ