ವಾಷಿಂಗ್ಟನ್ : ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ನಾಗರಿಕರಿಗೆ “ಟೆಹ್ರಾನ್ ತಕ್ಷಣ ಖಾಲಿ ಮಾಡಿ” ಎಂಬ ಸೂಚನೆ ನೀಡಿದ್ದಾರೆ.
ಟ್ರಂಪ್ ಈ ಎಚ್ಚರಿಕೆಯನ್ನು ತಮ್ಮ ಅಧಿಕೃತ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯ ಮೂಲಕ ಪ್ರಕಟಿಸಿದ್ದು, “ಇದು ತುರ್ತು ಪರಿಸ್ಥಿತಿ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಎಲ್ಲರೂ ತಕ್ಷಣ ಟೆಹ್ರಾನ್ ಅನ್ನು ಬಿಟ್ಟು ಹೊರಡಿ ಎಂದು ಎಕ್ಸ್ ಖಾತೆಯಲ್ಲಿ ಟ್ರಂಪ್ ಸೂಚನೆ ನೀಡಿದ್ದಾರೆ.
ಮಧ್ಯಪ್ರಾಚ್ಯದ ಪರಿಸ್ಥಿತಿಯಿಂದಾಗಿ ಟ್ರಂಪ್ ಸೋಮವಾರ ಕೆನಡಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಿಂದ ಒಂದು ದಿನ ಮುಂಚಿತವಾಗಿ ಹೊರಡಬೇಕಿತ್ತು ಎಂದು ಶ್ವೇತಭವನ ತಿಳಿಸಿದೆ. ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಗೆ ನೀಡುವುದು ತಕ್ಷಣದ ಉದ್ದೇಶವಾಗಿರುವುದರಿಂದ ಟ್ರಂಪ್ ಅವರ ಆರಂಭಿಕ ನಿರ್ಗಮನ ಸಕಾರಾತ್ಮಕವಾಗಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.
ಇದರ ಮಧ್ಯೆ ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ಮಂಗಳವಾರ ಮುಂಜಾನೆ ಭಾರಿ ಸ್ಫೋಟಗಳು, ವಾಯು ರಕ್ಷಣಾ ಗುಂಡು ಗರ್ಜನೆಗಳು ದಾಖಲಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈ ಸ್ಫೋಟಗಳು ಇಸ್ರೇಲ್‌ನ ಪ್ರತಿದಾಳಿ ಎಂದು ಶಂಕಿಸಲಾಗಿದೆ. ಇರಾನ್‌ನ ಪ್ರಮುಖ ಪರಮಾಣು ಸ್ಥಾವರವಿರುವ ನಟಾಂಜ್ ನಗರದಲ್ಲಿಯೂ ರಕ್ಷಣಾ ವ್ಯವಸ್ಥೆ ಸಕ್ರಿಯಗೊಂಡಿರುವ ಮಾಹಿತಿ ಲಭಿಸಿದೆ.
ಇಸ್ರೇಲ್‌ನ ರಾಜಧಾನಿ ಟೆಲ್ ಅವೀವ್‌ನಲ್ಲಿ ಮಧ್ಯರಾತ್ರಿ ವಾಯುದಾಳಿ ಸೈರನ್‌ಗಳು ಹತ್ತಿರದ ಬಾಂಬುಶೆಲ್ಟರ್‌ಗಳಿಗೆ ಜನರನ್ನು ಓಡಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಅವರ ಪ್ರಕಾರ, ಇತ್ತೀಚಿನ ದಾಳಿಯಿಂದ 3,000ಕ್ಕೂ ಹೆಚ್ಚು ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಇರಾನ್‌ನಲ್ಲಿ ಕಳೆದ ಐದು ದಿನಗಳಲ್ಲಿ 224 ಮಂದಿ ನಾಗರಿಕರು ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ 24 ನಾಗರಿಕರು ಸಾವಿಗೀಡಾಗಿದ್ದಾರೆ. ಎರಡೂ ದೇಶಗಳ ಮಧ್ಯೆ ತೀವ್ರವಾದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.














