‘ಬದ್ಧ’ ಎಂದರೆ ಸಂಸ್ಕೃತದಲ್ಲಿ ಕಟ್ಟಲ್ಪಟ್ಟದ್ದು ಅಥವಾ ಹಿಡಿತಕ್ಕೆ, ಬಿಗಿಗೆ ಒಳಗಾದುದು ಎಂದರ್ಥ. ಈ ಆಸನದ ಅಭ್ಯಾಸದಿಂದ ಇಡೀ ಶರೀರದಲ್ಲಿ ಒಂದು ರೀತಿಯ ಸೆಳೆತ, ಬಿಗಿ ಬರುತ್ತದೆ. ಕಾಲಿನ ಹೆಬ್ಬೆರಳಿನಿಂದ ತಲೆಯ ತನಕ ಶರೀರದ ಎಲ್ಲ ಅಂಗಗಳಲ್ಲೂ ಹೆಚ್ಚಿನ ಚಟುವಟಿಕೆ ಇರುತ್ತದೆ. ಆದ್ದರಿಂದಲೇ ‘ಬದ್ಧಪದ್ಮಾಸನ’ ವೆಂಬ ಹೆಸರು ಈ ಆಸನಕ್ಕೆ ಅನ್ವರ್ಥವಾದುದು.
ಮಾಡುವ ಕ್ರಮ
ಬದ್ಧ ಪದ್ಮಾಸನಕ್ಕೆ ಮೊದಲು ಯೋಗಾಭ್ಯಾಸಿಯೂ ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಎದೆಯನ್ನು ಸಾಕಷ್ಟು ಎತ್ತಿರಬೇಕು, ಹೊಟ್ಟೆ ಸಾಧ್ಯವಾದಷ್ಟೂ ಒಳಗೆ ತೆಗೆದುಕೊಳ್ಳುವುದು ಉತ್ತಮ. ನಂತರ ಎರಡೂ ಕೈಗಳನ್ನು ಬೆನ್ನಿನ ಹಿಂದೆ ಒಂದು ಇನ್ನೊಂದನ್ನು ಛೇದಿಸುವಂತೆ ಇರಿಸಿಕೊಂಡು, ಎಡಗಾಲಿನ ಹೆಬ್ಬರಳನ್ನು ಎಡಗೈಯಿಂದಲೂ ಬಲಗಾಲಿನ ಹೆಬ್ಬೆರಳನ್ನು ಬಲಗೈಯಿಂದಲೂ ಹಿಡಿದುಕೊಳ್ಳಬೇಕು. ಈ ಸ್ಥಿತಿಯಲ್ಲಿನ ಕಾಲಿನ ಎರಡೂ ಮಂಡಿಗಳು ನೆಲವನ್ನು ಸ್ಪರ್ಶಿಸಿರಬೇಕು. ಕತ್ತು, ಎದೆ, ಬೆನ್ನುಗಳಲ್ಲಿ ಸೆಳೆತ ಬರಬೇಕು. ಇದೇ ಸ್ಥಿತಿಯಲ್ಲಿ ದೀರ್ಘವಾದ ಉಸಿರಾಟ ಉತ್ತಮ. ಅನಂತರ ಕಾಲುಗಳನ್ನು ಬದಲಾಯಿಸಿಕೊಳ್ಳಬಹುದು. ಈ ಆಸನವನ್ನು ನಾಲ್ಕೈದು ಬಾರಿ ಹೆಚ್ಚು ಸಮಯ ಹಾಗೂ ವಿಶ್ರಾಂತಿ ತೆಗೆದುಕೊಂಡು ಮಾಡಬಹುದು. ಕಾಲು ಕೈಗಳನ್ನು ಬದಲಾಯಿಸುವುದರಿಂದ ಸಮತೋಲನ ಶಕ್ತಿ ಬರುವುದು.
ಲಾಭಗಳು
ಪದ್ಮಾಸನದ ಎಲ್ಲ ಲಾಭಗಳನ್ನು ಈ ಆಸನದಿಂದಲೂ ಪಡೆಯಬಹುದು. ಬದ್ಧ ಪದ್ಮಾಸನದಿಂದ ಮಲಬದ್ಧತೆಯು ಸಹ ನಿವಾರಣೆಯಾಗುವುದು. ತಕ್ಕ ಮಟ್ಟಿಗೆ ಜೀರ್ಣಶಕ್ತಿಯು ಹೆಚ್ಚುವುದು. ಉಸಿರಾಟದಲ್ಲಿನ ಕೆಲವು ತೊಂದರೆಗಳೂ ಸ್ವಲ್ಪ ನಿವಾರಣೆಯಾಗುವುವು. ಕೈಗಳು ಬೆನ್ನಿನ ಹಿಂದೆ ಬರುವುದರಿಂದ ಎದೆಯು ವಿಶಾಲವಾಗುವುದು.