ಮೈಸೂರು: ಹಲವು ವಿವಾದಗಳ ನಡುವೆಯೂ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಭಾನುವಾರ ತೆರೆಬಿದ್ದಿದೆ.
ವನರಂಗದಲ್ಲಿ ನಡೆದ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ, ಮಾಜಿ ಸಿಎಂ ಮಗ ಮೃತಪಟ್ಟಾಗ ಇದೇ ರಂಗಾಯಣದಲ್ಲಿ ಶ್ರದ್ಧಾಂಜಲಿ ಸಭೆ ಮಾಡಿದರೂ ಯಾರು ವಿರೋಧಿಸಲಿಲ್ಲ ಯಾಕೆ? ಎಂದು ಪ್ರಶ್ನಿಸಿದರು.
, “ಅರ್ಬನ್ ನಕ್ಸಲ್ ಎಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡವರು ರಂಗಾಯಣಕ್ಕೆ ಮುಖ್ಯ ಅತಿಥಿಯಾಗಿ ಬಂದು ಹೋಗಿದ್ದಾರೆ”. “ಕೋಲೆ ಬಸವ ಕಾರ್ಯಕ್ರಮವನ್ನು ನೋಡಿ ಗೋವು ಎಂಬ ಕಾರಣಕ್ಕೆ ಅತಿಥಿ ಸ್ಥಾನದಿಂದ ಬಹಿಷ್ಕರಿಸಿದವರು ಬಂದು ಹೋಗಿದ್ದಾರೆ. ಬಾಂಗ್ಲಾ ನುಸುಳುಕೋರರಿಗೆ ಆಧಾರ್ ಕಾರ್ಡ್ ಕೊಡಿ, ಮತದಾನದ ಹಕ್ಕು ಕೊಡಬೇಕೆಂದು ವಿಚಾರಸಂಕಿರಣದಲ್ಲಿ ವಾದಿಸಿದವರು ಬಂದು ಹೋಗಿದ್ದಾರೆ. ಮಾಜಿ ಸಿಎಂ ಮಗ ವಿದೇಶದಲ್ಲಿ ಬೌನ್ಸರ್‌ನಿಂದ ಪೆಟ್ಟು ತಿಂದು ಮೃತಪಟ್ಟಾಗ ಅವರ ಶ್ರದ್ಧಾಂಜಲಿಯನ್ನು ರಂಗಾಯಣದಲ್ಲೇ ಮಾಡಿದಾಗ ಯಾರೂ ವಿರೋಧಿಸಲಿಲ್ಲ, ಧರಣಿ ಕೂರಲಿಲ್ಲ” ಎಂದು ಟೀಕಿಸಿದರು.
“ಕಳೆದ 32 ವರ್ಷದಿಂದ ರಂಗಾಯಣ ನಡೆಯುತ್ತಿದೆ. ಇಲ್ಲಿ ಆಡಳಿತ ನಡೆಸಿದವರು ತಮಗೆ ಬೇಕಾದ ಅತಿಥಿಗಳನ್ನು ಕರೆಸಿದ್ದಾರೆ. ಇಲ್ಲಿ ಬಂದವರೆಲ್ಲರೂ ಒಂದೇ ಪಂಥದ ಚಿಂತನೆಯವರು. ಆಗ ಯಾರೂ ಚಕಾರ ಎತ್ತಲಿಲ್ಲ” ಎಂದು ಹೇಳಿದರು.
“ಬಹುರೂಪಿಗೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಕರೆಸಿದ್ದಕ್ಕೆ ಕೆಲವರು ನನ್ನ ವಿರುದ್ಧ ಮುಗಿಬಿದ್ದಿದ್ದರು. 20 ದಿನಗಳ ಕಾಲ ಪ್ರತಿಭಟನೆ ನಡೆಸಿದರು” ಎಂದು ಅತಿಥಿಗಳನ್ನು ಕರೆಸಲು ನಡೆದ ವಿವಾದದ ಬಗ್ಗೆ ಅಡ್ಡಂಡ ಸಿ. ಕಾರ್ಯಪ್ಪ ಹರಿಹಾಯ್ದರು.
“ಬಿ. ವಿ. ಕಾರಂತರ ಹೆಸರಿನಲ್ಲಿ ಕಾಸು ಮಾಡಿಕೊಂಡಾಗಲೂ ಎಲ್ಲರೂ ಸುಮ್ಮನಿದ್ದರು. ಬಿಳಿ ಶರ್ಟು, ಬಿಳಿ ಪ್ಯಾಂಟು ಹಾಕಿಕೊಂಡು ಇದೇ ಸಮಾಜವಾದ ಎನ್ನುತ್ತಾ ಕನ್ನಡ ಸಂಸ್ಕೃತಿ ಇಲಾಖೆಯಿಂದ 75 ಲಕ್ಷ ಹಣವನ್ನು ಕೊಡಿಸಿಕೊಂಡು, 2 ಎಕರೆ ಜಾಗವನ್ನು ಪಡೆದ ಪೆಟ್ರೋಲ್ ಬ್ಯಾಂಕ್‌ನ ಮಾಲೀಕ ಪೋಸು ಕೊಟ್ಟಾಗಲೂ ಯಾರೂ ಕೇಳಲಿಲ್ಲ. ಶ್ರೇಷ್ಠ ಸಾಹಿತಿ ಡಾ. ಎಸ್. ಎಲ್. ಭೈರಪ್ಪರನ್ನು ರಂಗಾಯಣಕ್ಕೆ ಒಮ್ಮೆಯೂ ಆಹ್ವಾನಿಸದಾಗ ಯಾರು ಯಾಕೆ ಪ್ರಶ್ನಿಸಲಿಲ್ಲ” ಎಂದರು.