ಬೆಂಗಳೂರು: ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಟೋಲ್ ಸಂಗ್ರಹ ಇಂದಿನಿಂದ ಆರಂಭವಾಗಿದ್ದು, ಮೊದಲ ದಿನವೇ ಟೋಲ್ ಸಿಬ್ಬಂದಿ ವಿರುದ್ಧ ವಾಹನ ಸವಾರರು ಸಿಡಿಮಿಡಿಗೊಂಡಿದ್ದಾರೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುವ ವಾಹನಗಳಿಗೆ ಬೆಂಗಳೂರು ದಕ್ಷಿಣ ತಾಲೂಕಿನ ಕಣಮಿಣಿಕೆ ಬಳಿ ಟೋಲ್ ಸಂಗ್ರಹಿಸಲಾಗುತ್ತಿದ್ದು ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳಿಗೆ ರಾಮನಗರ ತಾಲೂಕಿನ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಟೋಲ್ ಸಂಗ್ರಹಿಸಲಾಗುತ್ತಿದೆ.
ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡಿಲ್ಲ. ಟೆಕ್ನಿಕಲ್ ಎರರ್ ಆಗುತ್ತಿದೆ. ಫಾಸ್ಟ್ಯಾಗ್ ಇದ್ರೂ ಟೋಲ್ ಪ್ಲಾಜಾ ಸ್ಕ್ಯಾನ್ ತೆಗೆದುಕೊಳ್ಳುತ್ತಿಲ್ಲ. ಸ್ಕ್ಯಾನ್ ಆಗೋದ್ರಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ ಟೋಲ್ ಕಂಬಿ ಕೂಡ ಸರಿಯಾಗಿ ವರ್ಕ್ ಆಗುತ್ತಿಲ್ಲ. ಸ್ಕ್ಯಾನ್ ಆಗಿ ವಾಹನ ಚಲಿಸುವಾಗಲೇ ವಾಹನದ ಮೇಲೆ ಕಂಬಿ ಬೀಳುತ್ತಿದೆ. ಹೀಗಾಗಿ ವಾಹನ ಚಾಲಕರು ಗರಂ ಆಗುತ್ತಿದ್ದಾರೆ. ಸಿದ್ಧತೆ ಮಾಡಿಕೊಳ್ಳದೇ ಯಾಕೆ ಟೋಲ್ ತಗೋತಿರಿ ಅಂತ ಅವಾಜ್ ಹಾಕುತ್ತಿದ್ದಾರೆ.
ರೈತ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದು, ನಾನು ರಾಮನಗರಕ್ಕೆ ಹೋಗಬೇಕು. ಒಂದೇ ಏಟಿಗೆ 250 ರೂ ಟೋಲ್ ಕಟ್ಟಬೇಕಂತೆ. ಇಷ್ಟು ದುಡ್ಡಲ್ಲಿ ಒಂದ್ ಆಳ್ ಕೆಲಸ ಮಾಡೋಕೆ ಬರ್ತಾರೆ. ಇಲ್ಲಿಂದಿಲ್ಲಿಗೆ ನಾವು ಇಷ್ಟು ಹಣ ಎಲ್ಲಿಂದ ತರೋದು. ಕುಮಾರಣ್ಣ ಇದರ ಬಗ್ಗೆ ಮಾತಾಡಬೇಕು. ನಮಗೆ ಸಪರೇಟ್ ಲೈನ್ ಬೇಕು. ಇವತ್ತು ಗಲಾಟೆ ಮಾಡಿದಕ್ಕೆ ಹಾಗೆಯೇ ಬಿಟ್ಟಿದ್ದಾರೆ. ನಾನು ಟೋಲ್ ಕಟ್ಟಿಲ್ಲ ಎಂದು ಕಣಮಿಣಕೆ ಟೋಲ್ ಪ್ಲಾಜಾ ಬಳಿ ರೈತ ರಾಜಣ್ಣ ಅಸಮಾಧಾನ ಹೊರ ಹಾಕಿದ್ದಾರೆ.