ನವದೆಹಲಿ: ಬಾಂಗ್ಲಾದೇಶದಲ್ಲಿ ದೇಶದ್ರೋಹದ ಆರೋಪದಡಿ ಬಂಧನಕ್ಕೊಳಗಾಗಿರುವ ಇಸ್ಕಾನ್ನ ಸನ್ಯಾಸಿ ಚಿನ್ಮಯ್ ಕೃಷ್ಣದಾಸ್ ಅವರ ಬಿಡುಗಡೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ ಸಂಸದರು ಲೋಕಸಭೆಯಲ್ಲಿ ಬುಧವಾರ ಆಗ್ರಹಿಸಿದರು.
ಶೂನ್ಯವೇಳೆಯಲ್ಲಿ ಮಾತನಾಡಿದ ಉಜ್ಜೈನಿ ಸಂಸದ ಅನಿಲ್ ಫಿರೊಜಿಯಾ ಅವರು ಈ ಒತ್ತಾಯವನ್ನು ಮಂಡಿಸಿದರು. ‘ಚಿನ್ಮಯ್ ಬಿಡುಗಡೆಗಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಲು ಯಾವ ವಕೀಲರೂ ಮುಂದೆ ಬಾರದಿರುವುದೂ ವಿಪರ್ಯಾಸ’ ಎಂದರು.
ಬಿಜೆಪಿ ಮಥುರಾ ಸಂಸದೆ ಹೇಮಾ ಮಾಲಿನಿ ಮಾತನಾಡಿ, ‘ಸನ್ಯಾಸಿ ಬಂಧನ ವಿಷಯ ಇಡೀ ಧರ್ಮಕ್ಕೆ ಆಗಿರುವ ಅವಮಾನ. ಹಿಂಸೆ ಹಾಗೂ ಅನ್ಯಾಯವನ್ನು ಎಂದಿಗೂ ಸಹಿಸಲಾಗದು. ಈ ವಿಷಯದಲ್ಲಿ ಮೌನವಾಗಿರಲು ಸಾಧ್ಯವಿಲ್ಲ. ಇದು ರಾಜತಾಂತ್ರಿಕ ವಿಷಯವಲ್ಲ. ಶ್ರೀಕೃಷ್ಣನ ಮೇಲಿನ ಭಕ್ತಿ ಹಾಗೂ ಭಾವನೆಗಳ ವಿಷಯವಾಗಿದೆ. ಬಾಂಗ್ಲಾದೇಶದಲ್ಲಿರುವ ಮಧ್ಯಂತರ ಸರ್ಕಾರವು ಚಿನ್ಮಯ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ಬಿಜೆಪಿ ಸಂಸದ ದಿಲೀಪ್ ಸೈಕಿಯಾ ಮಾತನಾಡಿ, ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಹಾಗೂ ಇದನ್ನು ಸ್ಥಗಿತಗೊಳಿಸಲು ಆಗ್ರಹಿಸಿ ಲೋಕಸಭೆಯು ನಿರ್ಣಯ ಅಂಗೀಕರಿಸಬೇಕು. ಆ ಸಂದೇಶವನ್ನು ಬಾಂಗ್ಲಾದೇಶ ಸರ್ಕಾರಕ್ಕೆ ಕಳುಹಿಸಿಕೊಡಬೇಕು’ ಎಂದು ಒತ್ತಾಯಿಸಿದರು.
1971ರಲ್ಲಿ ಬಾಂಗ್ಲಾದೇಶ ರಚನೆಯಾದ ಸಂದರ್ಭದಲ್ಲಿ ಲಕ್ಷಗಟ್ಟಲೆ ಬಾಂಗ್ಲಾದೇಶದ ಮುಸ್ಲೀಮರು ಅಸ್ಸಾಂ ಒಳಗೆ ನುಸುಳಿದ್ದರು. ಹೀಗಾಗಿ ಅವರು ನಮ್ಮ ಚುನಾವಣಾ ವ್ಯವಸ್ಥೆಯ ಒಳ ಸೇರಿದ್ದು, ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.