ವ್ಯಕ್ತಿಯೊಬ್ಬ ಅಡಮಾನದ ಸಾಲ ತೀರಿಸಿದರೆ ಆತ ಅಡಮಾನವಿರಿಸಿದ್ದ ಸಂದರ್ಭದಲ್ಲಿ ಆಸ್ತಿಯನ್ನು ಮತ್ತೊಬ್ಬರಿಗೆ ವರ್ಗಾಯಿಸಿದ್ದಾನೆ ಎನ್ನುವ ಏಕೈಕ ಕಾರಣದಿಂದ ಸಾಲ ನೀಡಿದ್ದ ಬ್ಯಾಂಕ್ ಅಡಮಾನವಿರಿಸಿದ ಆಸ್ತಿಯ ಹಕ್ಕುಪತ್ರವನ್ನು ಆತನಿಗೆ ಮರಳಿಸದೆ ತಡೆಹಿಡಿಯುವಂತಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
[ವಿನು ಮಾಧವನ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇನ್ನಿತರರ ನಡುವಣ ಪ್ರಕರಣ].
ಸಾಲ ಪಡೆದುಕೊಳ್ಳುವ ಏಕೈಕ ಉದ್ದೇಶ ಅಡಮಾನದ ಹಣವನ್ನು ಮರುಪಾವತಿ ಮಾಡುವ ಮೂಲಕ ಪೂರ್ಣಗೊಂಡಿರುವುದರಿಂದ ಭದ್ರತಾ ದಾಖಲೆಗಳನ್ನು ತಡೆಹಿಡಿಯುವ ಬ್ಯಾಂಕಿನ ಕಾರ್ಯವು ಕಾನೂನುಬಾಹಿರವೂ, ನಿರಂಕುಶವೂ ಅಗಿದೆ ಎಂದು ನ್ಯಾ. ಶಾಜಿ ಪಿ ಚಾಲಿ ಹೇಳಿದ್ದಾರೆ.
ಅಡಮಾನದ ಅವಧಿಯಲ್ಲಿ ಅವರು ಅಡಮಾನದ ಆಸ್ತಿಯನ್ನು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಿದ್ದಾರೋ ಇಲ್ಲವೋ ಎಂಬುದು ಈ ಸಂದರ್ಭದಲ್ಲಿ ಅಪ್ರಸ್ತುತವಾಗಿದೆ ಎಂದು ಏಕಸದಸ್ಯ ಪೀಠ ತಿಳಿಸಿತು.
“ಅಡಮಾನವನ್ನು ಆಧಾರವಾಗಿಟ್ಟಿರುವ ಸಮಯದಲ್ಲಿ ಅರ್ಜಿದಾರರು ಆಸ್ತಿ ವರ್ಗಾಯಿಸಿದ್ದಾರೆ ಎಂಬ ಅಂಶ ಸ್ಪಷ್ಟವಾಗಿದೆ. ಆದರೂ ಸಾಲದ ಖಾತೆ ಮುಕ್ತಾಯಗೊಳಿಸುವ ಮೂಲಕ ಬ್ಯಾಂಕ್ ಹಿತಾಸಕ್ತಿಯನ್ನು ರಕ್ಷಿಸಲಾಗಿದೆ. ಅಡಮಾನವನ್ನು ಆಧಾರವಾಗಿಟ್ಟಿರುವ ಸಮಯದಲ್ಲಿ ಅರ್ಜಿದಾರರು ಆಸ್ತಿ ವರ್ಗಾಯಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಭದ್ರತಾ ದಾಖಲೆಗಳನ್ನು ತಡೆಹಿಡಿಯುವ ಅರ್ಹತೆ ಬ್ಯಾಂಕ್ಗೆ ಇಲ್ಲ. ಇದಲ್ಲದೆ ಆಗಿರುವ ವಂಚನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ತೀರ್ಮಾನಿಸುವ ಅರ್ಹತೆಯನ್ನು ಬ್ಯಾಂಕ್ ಹೊಂದಿಲ್ಲ. ಏಕೆಂದರೆ ಅಡಮಾನವನ್ನು ಅರ್ಜಿದಾರರು ಸಾಲವನ್ನು ಸುರಕ್ಷಿತವಾಗಿ ಇಡಲು ರೂಪಿಸಲಾಗಿದ್ದು ಅದನ್ನು ಅರ್ಜಿದಾರರು ಪಾವತಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ಅಡಮಾನದಾರ ಆಸ್ತಿ ವರ್ಗಾಯಿಸಿದ್ದರಿಂದ ಬ್ಯಾಂಕ್ ಯಾವುದೇ ನಷ್ಟ ಅನುಭವಿಸಿದರೆ ಆ ಕುರಿತು ನ್ಯಾಯಾಲಯ ತೀರ್ಪು ನೀಡಬೇಕೆ ವಿನಾ ಬ್ಯಾಂಕ್ ಅಲ್ಲ ಎಂದು ಪೀಠ ಕಟುವಾಗಿ ನುಡಿದಿದೆ.
“ಭದ್ರತಾ ದಾಖಲೆಯನ್ನು ತಡೆಹಿಡಿಯುವ ಬ್ಯಾಂಕ್ನ ಏಕಪಕ್ಷೀಯ ಕ್ರಮ ಕಾನೂನುಬಾಹಿರವೂ, ನಿರಂಕುಶವೂ ಆಗಿದೆ. ಅರ್ಜಿದಾರರು ಮಾಡಿದ ಆಸ್ತಿಯ ವರ್ಗಾವಣೆ ಪರಿಣಾಮವಾಗಿ ಬ್ಯಾಂಕ್ ಯಾವುದೇ ನಷ್ಟವನ್ನು ಅನುಭವಿಸಿದರೆ, ಅದನ್ನು ಸಕ್ಷಮ ನ್ಯಾಯಾಲಯ ನಿರ್ಣಯಿಸಬೇಕೇ ವಿನಾ ಬ್ಯಾಂಕ್ ಅಲ್ಲ” ಎಂದು ಪೀಠ ತಿಳಿಸಿದೆ.
ಆ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್’ಬಿಐ) ಗೃಹ ಸಾಲ ಪಡೆದ ವ್ಯಕ್ತಿಯೊಬ್ಬರಿಗೆ ಹಕ್ಕುಪತ್ರ ಸೇರಿದಂತೆ ಎಲ್ಲಾ ಭದ್ರತಾ ದಾಖಲೆಗಳನ್ನು ಮರಳಿ ನೀಡತಕ್ಕದ್ದು ಎಂದು ನ್ಯಾಯಾಲಯ ನಿರ್ದೇಶಿಸಿತು.