ಮನೆ ರಾಜಕೀಯ ಬಿಜೆಪಿ ಸರಕಾರದ ಮೀಸಲು ಸರ್ಕಸ್’ಗೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಬಿಜೆಪಿ ಸರಕಾರದ ಮೀಸಲು ಸರ್ಕಸ್’ಗೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

ಚುನಾವಣೆ ಹೊತ್ತಿನಲ್ಲಿ ಮೀಸಲು ಮರು ಹಂಚಿಕೆ ಮಾಡಿ ಬಿಜೆಪಿ ರಾಜಕೀಯ: ಹೆಚ್ ಡಿಕೆ

0

ಬೆಂಗಳೂರು: ಚುನಾವಣೆ ಹೊತ್ತಿನಲ್ಲಿ ಮೀಸಲು ಮರು ಹಂಚಿಕೆ ಮಾಡಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿಗಳು, ಬಿಜೆಪಿಯ ಪಾಪದ ಕೊಡ ತುಂಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಲ್ಲದೆ; ಬಿಜೆಪಿರನ್ನು ಕೌರವರಿಗೆ ಹೋಲಿಸಿ ಟಾಂಗ್ ನೀಡಿದ್ದಾರೆ ಹಾಗೂ ಬಿಜೆಪಿ ಮೀಸಲು ಮೋಸ ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

ರಾಜ್ಯ ಬಿಜೆಪಿ ಸರಕಾರ ಪ್ರತಿಯೊಂದರಲ್ಲಿಯೂ ರಾಜಕೀಯ ಮಾಡುತ್ತದೆ, ಪ್ರತಿಯೊಂದರಲ್ಲಿಯೂ ಚುನಾವಣೆಯನ್ನೇ ಕಾಣುತ್ತದೆ! ಸಂಪುಟದಲ್ಲಿ ಸಭೆಯ ಮೀಸಲಾತಿ ಹಕೀಕತ್ತೇ ಒಂದು ಖತರ್ನಾಕ್ ನಾಟಕ. ಕೊಡಲು ಕೈ ಬಾರದು, ಕೊಡಲೂ ಆಗದು. ಹಣೆಗೆ ಮಣೆಯಿಂದ ಬಾರಿಸಿಕೊಳ್ಳುವುದೂ ಎಂದರೆ ಇದೆ. ಪಾಪದ ಪಾಶ ಬಿಜೆಪಿ ಬೆನ್ನುಬಿದ್ದಿದೆ ಎಂದು ಕುಮಾರಸ್ವಾಮಿ ಅವರು ಕುಟುಕಿದ್ದಾರೆ.

ಚುನಾವಣೆ ಎಂಬ ಚದುರಂಗದಾಟದಲ್ಲಿ ರಾಜ್ಯ ಬಿಜೆಪಿ ಬಿಸಿಲುಗುದರೆಯ ಮೇಲೆ ಸವಾರಿ ಮಾಡುತ್ತಿದೆ, ಅಷ್ಟೇ ಅಲ್ಲ; ಕ್ರೂರ ವ್ಯಾಘ್ರನ ಮೇಲೂ ಕುಳಿತು ಕುರುಡಾಗಿ ಸರ್ಕಸ್‌ ಮಾಡುತ್ತಿದೆ. ಸಾಗು, ಇಲ್ಲವೇ ಹೋಗು ಎನ್ನುವ ದುಸ್ಥಿತಿಯಲ್ಲಿ ತೋಯ್ದಾಡುತ್ತಿದೆ. ಮತದ ಹೆಸರಿನಲ್ಲಿ ಮತಯುದ್ಧ ಗೆಲ್ಲಬಹುದೆಂದು ಚಟಕ್ಕೆ ಬಿದ್ದಿರುವ ರಾಜ್ಯ ಬಿಜೆಪಿ, ಈಗ ಸರ್ವಜನರ ಕಲ್ಯಾಣದ ಪ್ರತೀಕವಾದ ಕರ್ನಾಟಕದಲ್ಲಿ ಮೀಸಲು ಕಳ್ಳಾಟ ಆಡಿದೆ. ಗೆಲ್ಲಲೇಬೇಕು, ಗೆಲ್ಲದಿದ್ದರೆ ಇನ್ನೊಬ್ಬರ ತಟ್ಟೆಗೆ ಕೈ ಹಾಕು, ಆಗದಿದ್ದರೆ ಕಸಿದುಕೋ.. ಇದೇ ಕಮಲಪಕ್ಷದ ಕುಟಿಲತೆ ಎಂದಿದ್ದಾರೆ ಅವರು.

ಮೂರೂವರೆ ವರ್ಷದಿಂದ ಗಾಳಿಯಲ್ಲಿ ಗಾಳೀಪಟ ಹಾರಿಸಿಕೊಂಡೇ ಕಾಗಕ್ಕಗುಬ್ಬಕ್ಕನ ಕಥೆ ಹೇಳಿದ್ದ ರಾಜ್ಯ ಬಿಜೆಪಿ ಸರಕಾರ ಚುನಾವಣೆ ಗಿಮಿಕ್ಕಿನ ಸಂಪುಟ ಸಭೆಯಲ್ಲಿ ಮೀಸಲು ತುಪ್ಪವನ್ನು ಜನರ ಹಣೆಗೆ ಸವರುವ ಬೂಟಾಟಿಕೆ ನಡೆಸಿದೆ. ಕಲ್ಲಬೆಕ್ಕು ಕಣ್ಮುಚ್ಚಿ ಹಾಲು ಕುಡಿಯಲು ಹೊರಟಿದೆ. ಒಬ್ಬರ ಅನ್ನ ಕಸಿದುಕೊಂಡು ಇನ್ನೊಬ್ಬರ ಹೊಟ್ಟೆ ತುಂಬಿಸಬಹುದು ಎನ್ನುವ ಬಿಜೆಪಿಗರ ರಕ್ಕಸಚಾಳಿ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಆಶಯಕ್ಕೆ ಶಾಶ್ವತ ಸಮಾಧಿ ಕಟ್ಟುವಂತಿದೆ.  ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲದವರ ನಡವಳಿಕೆ ಇದು ಎಂದು ಮಾಜಿ ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀಸಲು ಕೊಡುವುದು ತಪ್ಪಲ್ಲ, ಆದರೆ, ತನ್ನ ಹಿಡೆನ್‌ ಅಜೆಂಡಾವನ್ನು ಮೀಸಲಿನೊಳಕ್ಕೂ ನುಸುಳಿಸಿದ ರಾಜ್ಯ ಬಿಜೆಪಿ ಸರಕಾರದ ನರಿ ರಾಜಕಾರಣ ಆಘಾತಕಾರಿ. ಸಾಮಾಜಿಕ ನ್ಯಾಯದಿಂದಲೇ ಇಡೀ ದೇಶಕ್ಕೆ ಮೇಲ್ಪಂಕ್ತಿಯಾಗಿದ್ದ ಕರ್ನಾಟಕವನ್ನು ಮೀಸಲು ಮೂಲಕವೇ ವಿಭಜಿಸಿ ಮತಫಸಲು ತೆಗೆಯುವ ದುರಾಲೋಚನೆಯೊಂದಿಗೆ ಬಿಜೆಪಿ, ಸಾಮಾಜಿಕ ನ್ಯಾಯಕ್ಕೆ ಚಟ್ಟ ಕಟ್ಟಿ ಸ್ಮಶಾಣ ಕೇಕೆ ಹಾಕುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಳ ಮೀಸಲು ಎನ್ನುವುದು ಒಡೆಯಲಾಗದ ಕಗ್ಗಂಟೇನಲ್ಲ. ಬಿಜೆಪಿ ಸರಕಾರಕ್ಕೆ ಇಚ್ಛಾಶಕ್ತಿ ಇಲ್ಲವಷ್ಟೇ. ಆದರೆ, ಚುನಾವಣೆ ಹೊತ್ತಿನಲ್ಲಿ ಜಾತಿ ಜಾತಿಗಳ ನಡುವೆ ವೈಮನಸ್ಸು ತಂದು ಉರಿಯುವ ಕಿಚ್ಚಿನಲ್ಲಿ ಚಳಿ ಕಾಯಿಸಿಕೊಳ್ಳಬೇಕು ಎನ್ನುವುದೇ ಬಿಜೆಪಿಯ ಅಸಲಿ ಆಟ. ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಮುಸ್ಲೀಮರಿಗೆ 2ಬಿ ಅಡಿಯಲ್ಲಿ ನೀಡಿದ್ದ ಶೇ.4ರಷ್ಟು ಮೀಸಲು ಕಸಿದುಕೊಂಡು, ಅದಕ್ಕೆ ಆರ್ಥಿಕ ಹಿಂದುಳಿದಿರುವಿಕೆಯ ಲೇಪ ಹಚ್ಚಿ, ಮೀಸಲು ಆಶಯವನ್ನೇ ಹಾಳುಗೆಡವಿ ಬದುಕುಗಳನ್ನು ಸುಟ್ಟು ಹಾಕುವ ದುಷ್ಟತನವಲ್ಲದೆ ಮತ್ತೇನೂ ಅಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

ಬಿಜೆಪಿ ಪಾಪದಕೊಡ ಭರ್ತಿ ಆಗಿದೆ. ರಾಜ್ಯವನ್ನು ಧರ್ಮದ ಹೆಸರಿನಲ್ಲಿ ವಿಭಜಿಸಿ, ಜಾತಿಜಗಳಕ್ಕೆ ತುಪ್ಪ ಸುರಿಯುತ್ತಿದೆ. ಅರಗಿನ ಮನೆಯಲ್ಲಿ ಪಾಂಡವರಿಗೆ ಕೊಳ್ಳಿ ಇಡಲು ಹೋಗಿ ಮುಂದೊಮ್ಮೆ ತಾವೇ ಎಸಗಿದ ಪಾಪಕುಂಡದಲ್ಲಿ ಬೆಂದುಹೋದ ಕೌರವರಂತೆ, ಬಿಜೆಪಿಗರು ಮದವೇರಿ ಮೆರೆಯುತ್ತಿದ್ದಾರೆ.ಉರಿಯುತ್ತಿರುವ ಜನರ ಒಡಲು ತಣ್ಣಗಾಗುವುದಿಲ್ಲ. ನೆನಪಿರಲಿ.. ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದಿನ ಲೇಖನಡಬ್ಲ್ಯುಪಿಎಲ್‌: ಫೈನಲ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್
ಮುಂದಿನ ಲೇಖನಅಡಮಾನದಾರರು ಆಸ್ತಿ ವರ್ಗಾಯಿಸಿದ್ದಾರೆ ಎನ್ನುವ ಕಾರಣಕ್ಕೆ ಬ್ಯಾಂಕ್ ಹಕ್ಕುಪತ್ರ ತಡೆ ಹಿಡಿಯುವಂತಿಲ್ಲ: ಕೇರಳ ಹೈಕೋರ್ಟ್