ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಡೆದ ಅಬ್ದುಲ್ ರಹೀಂ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಪೊಲೀಸರು ಈವರೆಗೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಪ್ರಕರಣಕ್ಕೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ತನಿಖೆ ನಾನಾ ಆಯಾಮಗಳಲ್ಲಿ ನಡೆಯುತ್ತಿದ್ದು, ಇದು ಕೋಮು ದ್ವೇಷದ ಪರಿಣಾಮವೇ ಅಥವಾ ಹಳೆಯ ವೈಯಕ್ತಿಕ ದ್ವೇಷವೇ ಎಂಬುದರ ಬಗ್ಗೆ ಸ್ಪಷ್ಟತೆ ಇನ್ನೂ ಸಿಗಬೇಕಿದೆ.
ಈ ಪ್ರಕರಣದ ಸಂಬಂಧ ಕುರುಯಾಳ ನಿವಾಸಿ ದೀಪಕ್ (21), ಅಮ್ಮುಂಜೆ ನಿವಾಸಿಗಳಾದ ಪೃಥ್ವಿರಾಜ್ (21) ಮತ್ತು ಚಿಂತನ್ (19), ಸುಮಿತ್ ಮತ್ತು ರವಿರಾಜ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಹತ್ಯೆ ಹಳೆಯ ದ್ವೇಷದ ಹಿನ್ನೆಲೆಯಿಂದ ನಡೆದಿದೆ ಎಂಬುದು ತಿಳಿದುಬಂದಿದ್ದುದು. ಆದರೆ ಇದು ಕೋಮು ದ್ವೇಷದ ಪರಿಣಾಮವೇ, ಅಥವಾ ಮೇ 1ರಂದು ನಡೆದ ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರವೋ ಅಥವಾ ಮತ್ತೊಬ್ಬ ಯುವಕ ಅಶ್ರಫ್ ಹತ್ಯೆಗೆ ಸಂಬಂಧವಿದೆಯೋ ಎಂಬುದರ ಬಗ್ಗೆ ಯಾವುದೇ ದೃಢತೆ ಸಿಕ್ಕಿಲ್ಲ. ಹೀಗಾಗಿ, ನಿಖರ ಕಾರಣ ಇನ್ನೂ ಗುಟ್ಟಾಗಿಯೇ ಉಳಿದಿದೆ.
ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ವಿಜಯ್ ಪ್ರಸಾದ್ ಅವರ ನೇತೃತ್ವದಲ್ಲಿ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಎಲ್ಲರಿಗೂ ನ್ಯಾಯ ದೊರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಇತ್ತೀಚೆಗಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗಳ ಸಂಖ್ಯೆ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ.
- ಏಪ್ರಿಲ್ 27: ಕುಡುಪಿನಲ್ಲಿ ಅಶ್ರಫ್ ಹತ್ಯೆ
- ಮೇ 1: ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ
- ಮೇ 27: ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಹತ್ಯೆ
ಈ ಹತ್ಯೆಗಳು ಪರಸ್ಪರ ಸಂಬಂಧಿತವಾಗಿವೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದು, ಜಿಲ್ಲೆಯಲ್ಲಿ ಕೋಮು ಸಂವೇದನಾಶೀಲತೆ ಹೆಚ್ಚಿರುವುದು ಗಂಭೀರ ವಿಷಯವಾಗಿದೆ.
ಅಬ್ದುಲ್ ರಹೀಂ ಹತ್ಯೆಯ ನಂತರ ಜಿಲ್ಲೆಯಲ್ಲಿ ಮುಸ್ಲಿಂ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರನ್ನು ವರ್ಗಾಯಿಸಿ, ಖಡಕ್ ಐಪಿಎಸ್ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿಯನ್ನು ನೂತನ ಕಮೀಷನರ್ ಆಗಿ ನೇಮಿಸಿದೆ.














