ನಾವು ಯಾವುದೇ ದೇವಸ್ಥಾನಕ್ಕೆ ಹೋದರೂ ನಮಗೆ ಆ ದೇವಾಲಯದ ಪ್ರಾಕಾರದಲ್ಲಿ ನವಗ್ರಹಗಳ ಕಟ್ಟೆ ಅಥವಾ ಪುಟ್ಟ ಗುಡಿ ಕಾಣ ಸಿಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯಲ್ಲಿ ನವಗ್ರಹಗಳಿಗೆ ವಿಶಿಷ್ಠ ಸ್ಥಾನವನ್ನು ನೀಡಲಾಗಿದೆ.
ಶುಭಕಾರ್ಯ ಮಾಡುವಾಗ, ಸತ್ಯನಾರಾಯಣ ಪೂಜೆ ಮಾಡುವಾಗ ಕೂಡ ನವಗ್ರಹಗಳ ಪೂಜೆ ಮಾಡುತ್ತಾರೆ. ಗ್ರಹಬಲವಿಲ್ಲದೆ ಯಾವುದೇ ಕಾರ್ಯ ನಡೆಯುವುದಿಲ್ಲ ಎಂಬುದು ನಮ್ಮ ಹಿರಿಯರ ನಂಬಿಕೆ. ಉಪನಯನ ಮಾಡಲು ಗುರು ಬಲ ಇರಬೇಕು, ಶುಕ್ರನಿಂದ ಕಲ್ಯಾಣ ಯೋಗ ಬರುತ್ತದೆ ಎಂದು ಹೇಳುತ್ತಾರೆ. ಹೀಗಾಗಿಯೇ ದೇವಾಲಯಗಳಿಗೆ ಬರುವ ಭಕ್ತ ಜನರು
ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯಚ,
ಗುರು ಶುಕ್ರ, ಶನಿಭ್ಯಶ್ಚ ರಾಹುವೇ ಕೇತುವೇ ನಮಃ ಎಂದು ನವಗ್ರಹಗಳಿಗೆ 9 ಸುತ್ತು ಹಾಕುತ್ತಾರೆ.
ತಮಿಳುನಾಡಿನಲ್ಲಿ ನವಗ್ರಹಗಳಿಗೆ ಪ್ರತ್ಯೇಕ ದೇವಾಲಯವೇ ಇದೆ. ತಂಜಾವೂರಿನಿಂದ ಇಲ್ಲವೇ ಕುಂಭಕೋಣಂನಿಂದ ಈ ಒಂಭತ್ತೂ ದೇವಾಲಯಗಳಿಗೆ ಹೋಗಿ ಬರುತ್ತಾರೆ.
ಇಷ್ಟು ದೂರದ ನವಗ್ರಹ ದೇವಾಲಯಗಳಿಗೆ ಹೋಗಲು ಶಕ್ತಿ ಇಲ್ಲದವರು ತಮ್ಮ ಮನೆ ಬಳಿ ಇರುವ ದೇವಾಲಯಗಳ ನವಗ್ರಹ ಮಂಟಪಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ಆದರೆ ಬೆಂಗಳೂರಿನಲ್ಲಿ ನವಗ್ರಹಗಳಿಗೆ ಒಂದೇ ಸ್ಥಳದಲ್ಲಿ ಪ್ರತ್ಯೇಕ ದೇವಾಲಯವಿದೆ ಎಂಬುದು ಹಲವರಿಗೆ ತಿಳಿದಿಲ್ಲ. ಅದೆಲ್ಲಿದೆ ಗೊತ್ತೆ ಬಸವನಗುಡಿಯಲ್ಲಿ.
ಬೆಂಗಳೂರಿನ ಬಸವನಗುಡಿಯ ಸನ್ನಿಧಿ ರಸ್ತೆಯಲ್ಲಿರುವ ಪುರಾತನ ಮಲ್ಲಿಕಾರ್ಜುನ ದೇವಾಲಯ ಹಾಗೂ ಕಹಳೆ ಬಂಡೆ ಉದ್ಯಾನವನದ ನಡುವೆ ಇರುವ ವಿಶಾಲ ಪ್ರದೇಶದಲ್ಲಿ 2009ರಲ್ಲಿ ಸ್ಥಾಪನೆಯಾದ ವಿನೂತನ ವಿಶೇಷ ನವಗ್ರಹ ದೇವಾಲಯ ಆಸ್ತಿಕರನ್ನು ಕೈಬೀಸಿ ಕರೆಯುತ್ತಿದೆ.
ಹೆಸರೇ ವಿಶೇಷ ನವಗ್ರಹ ದೇವಾಲಯ ಎಂದ ಮೇಲೆ ಇಲ್ಲಿ ವಿಶೇಷ ಇರಲೇ ಬೇಕಲ್ಲವೇ. ಇಲ್ಲಿ ನಿಜಕ್ಕೂ ವಿಶೇಷವಿದೆ. ಒಂದೇ ಪ್ರದೇಶದಲ್ಲಿ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು, ಕೇತು ಗ್ರಹಗಳಿಗೆ ಪ್ರತ್ಯೇಕವಾದ ಪುಟ್ಟ ಪುಟ್ಟ ದೇವಾಲಯ ನಿರ್ಮಿಸಲಾಗಿದೆ. ಜೊತೆಗೆ ದಕ್ಷಿಣಾಮೂರ್ತಿ ಹಾಗೂ ಹನುಮಂತನ ಆಲಯವೂ ಇಲ್ಲಿದೆ.
ಒಂದೇ ಸಂಕೀರ್ಣದಲ್ಲಿ 11 ಪುಟ್ಟ ದೇವಾಲಯಗಳು ಇರುವುದು ಇಲ್ಲಿನ ವಿಶೇಷ. ಇದರ ಎದುರು ಬೃಹದಾಕಾರದ ಅಶ್ವತ್ಥವೃಕ್ಷವಿದೆ. ಅಶ್ವತ್ಥ ವೃಕ್ಷದ ಕೆಳಗೆ ನಾಗರ ಕಲ್ಲುಗಳನ್ನು ಪ್ರತಿಷ್ಠಾಪಿಸಲಾಗಿದೆ.
ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಪಕ್ಕದಲ್ಲೇ ಇರುವ ಇಲ್ಲಿ ಮೊದಲಿಗೆ ದಕ್ಷಿಣಾಮೂರ್ತಿಯ ದರ್ಶನವಾಗುತ್ತದೆ. ಅದರ ಪಕ್ಕದಲ್ಲಿ ಪೂರ್ವಾಭಿಮುಖವಾಗಿ ಶುಕ್ರ, ಆಂಜನೇಯ ದೇವಾಲಯಗಳಿದ್ದರೆ, ದಕ್ಷಿಣಾಭಿಮುಖವಾಗಿ ದಕ್ಷಿಣಾಮೂರ್ತಿ, ಮಂಗಳ, ಕೇತು ದೇವಾಲಯಗಳಿವೆ.
ಪಶ್ಚಿಮಾಭಿಮುಖವಾಗಿ ಚಂದ್ರ, ಶನಿ ದೇವಾಲಯಗಳಿವೆ. ಇನ್ನು ಉತ್ತರಾಭಿಮುಖವಾಗಿ ಗುರು ಹಾಗೂ ಬುಧ ದೇವಾಲಯಗಳಿವೆ. ಶನಿದೇವರ ಗುಡಿಯ ಎದುರು ನೇರವಾಗಿ ಹನುಮಂತನ ಗುಡಿಯಿದೆ. ಇಲ್ಲಿ ಎಲ್ಲ ನವಗ್ರಹಗಳೂ ಸಪತ್ನೀಕರಾಗಿರುವ ಸುಂದರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಪಕ್ಕದಲ್ಲೇ ಸುಂದರವಾದ ಹಾಗೂ ಪುರಾತನವಾದ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವಿದೆ. ಸನಿಹದಲ್ಲೇ ಕಗ್ಗದ ಕವಿ ಡಿ.ವಿ.ಗುಂಡಪ್ಪ ಅವರು ನಿತ್ಯ ಬಂದು ಕೂರುತ್ತಿದ ಸುಂದರ ಬಂಡೆ ಇದೆ. ಈ ಬಂಡೆಯ ಮೇಲೆ ಈಗ ಅವರ ಕಲ್ಲಿನ ಪ್ರತಿಮೆ ಸ್ಥಾಪಿಸಲಾಗಿದೆ.