ಮನೆ ಸುದ್ದಿ ಜಾಲ ತೆರಿಗೆ ಸಂಗ್ರಹ ಗುರಿ ಮುಟ್ಟಲು ಸಹಕರಿಸಿ: ಬಿಬಿಎಂಪಿ ಆಯುಕ್ತರ ಸೂಚನೆ

ತೆರಿಗೆ ಸಂಗ್ರಹ ಗುರಿ ಮುಟ್ಟಲು ಸಹಕರಿಸಿ: ಬಿಬಿಎಂಪಿ ಆಯುಕ್ತರ ಸೂಚನೆ

0

ಬೆಂಗಳೂರು : ಆಸ್ತಿ ತೆರಿಗೆ ಸಂಗ್ರಹದ ನಿಗದಿತ ಗುರಿ ಮುಟ್ಟಲು ಎಲ್ಲರೂ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ತಂತ್ರಜ್ಞಾನದ ನೆರವು ಪಡೆದುಕೊಂಡು ತೆರಿಗೆ ವಸೂಲಿಗೆ ಕ್ರಮ ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೂಚಿಸಿದರು.

ಬಿಬಿಎಂಪಿಯು 2021-22ನೇ ಸಾಲಿನಲ್ಲಿ 4000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದು, ಇದುವರೆಗೆ 2667.77 ಕೋಟಿ ರೂ. ಮಾತ್ರ ವಸೂಲು ಮಾಡಲಾಗಿದೆ. ಆರ್ಥಿಕ ವರ್ಷ ಅಂತ್ಯಕ್ಕೆ ಎರಡು ತಿಂಗಳಷ್ಟೇ ಬಾಕಿ ಇದ್ದು, ಇನ್ನೂ 1332.23 ಕೋಟಿ ರೂ. ಸಂಗ್ರಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಸಂಬಂಧ ಬುಧವಾರ ಅಧಿಕಾರಿಗಳೊಂದಿಗೆ ವರ್ಚುವಲ್‌ ಸಭೆಯಲ್ಲಿ  ಅವರು ಮಾತನಾಡಿದರು.

ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್‌ ಜಾರಿ ಮಾಡಿ ವಸೂಲಾತಿ ಮಾಡಬೇಕು. ತೆರಿಗೆ ಜಾಲದಡಿ ಬಾರದ ಆಸ್ತಿಗಳನ್ನು ಪತ್ತೆ ಮಾಡಿ ತೆರಿಗೆ ವ್ಯಾಪ್ತಿಗೆ ತರಬೇಕು. ತೆರಿಗೆ ಸಂಗ್ರಹಿಸಲು ಸುಧಾರಿತ ತಂತ್ರಜ್ಞಾನದ ಅವಶ್ಯಕತೆ ಇದ್ದರೆ, ಆ ನಿಟ್ಟಿನಲ್ಲಿಯೂ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ತಾಕೀತು ಮಾಡಿದರು.

ಅತ್ಯಧಿಕ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ಪಟ್ಟಿ ಮಾಡಿ, ಕಾನೂನುರೀತ್ಯ ಕ್ರಮ ಕೈಗೊಂಡು ವಸೂಲಿ ಮಾಡಬೇಕು. ಬಾಕಿ ಉಳಿದ ತೆರಿಗೆ ಮೊತ್ತ ಸಂಗ್ರಹಿಸಲು ಎಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು. ವಿಶೇಷ ಆಯುಕ್ತ (ಕಂದಾಯ) ಡಾ. ಆರ್‌.ಎಲ್‌.ದೀಪಕ್‌ ಸೇರಿದಂತೆ ಎಲ್ಲವಲಯ ಆಯುಕ್ತರು, ಜಂಟಿ ಆಯುಕ್ತರು, ಕಂದಾಯ ವಿಭಾಗದ ಉಪ ಆಯುಕ್ತರು, ಜಂಟಿ ಆಯುಕ್ತರು ಉಪಸ್ಥಿತರಿದ್ದರು.

ಹಿಂದಿನ ಲೇಖನಇಂದಿನ ದಿನದ ರಾಶಿ ಭವಿಷ್ಯ
ಮುಂದಿನ ಲೇಖನನನ್ನ ಹುಟ್ಟುಹಬ್ಬ ಆಚರಣೆ ಮಾಡಲ್ಲ: ಬಸವರಾಜ ಬೊಮ್ಮಾಯಿ