ಮುಂಬೈ (Mumbai)- ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ 15ನೇ ಆವೃತ್ತಿಯ ಫೈನಲ್ ಮತ್ತು ಪ್ಲೇ-ಆಫ್ಸ್ರ್ ಪಂದ್ಯಗಳ ವೇಳಾಪಟ್ಟಿ ಮತ್ತು ಸ್ಥಳಗಳ ವಿವರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾನುವಾರ ಪ್ರಕಟಿಸಿದೆ.
ಬಿಸಿಸಿಐ (BCCI) ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ ಪ್ರಕಾರ, ಕ್ವಾಲಿಫೈಯರ್-1 ಮತ್ತು ಎಲಿಮಿನೇಟರ್ ಪಂದ್ಯಗಳು ಮೇ 24 ಮತ್ತು 26ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆಯೋಜನೆ ಆಗಲಿವೆ. ಎರಡನೇ ಕ್ವಾಲಿಫೈಯರ್ ಪಂದ್ಯ (ಮೇ 27) ಮತ್ತು ಫೈನಲ್ ಪಂದ್ಯ ಮೇ 29 ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಎಲ್ಲಾ ಪಂದ್ಯಗಳಿಗೆ ಕ್ರೀಡಾಂಗಣ ಪ್ರೇಕ್ಷಕರಿಗೆ ಸಂಪೂರ್ಣವಾಗಿ ತೆರೆದುಕೊಳ್ಳಲಿದೆ. ಲೀಗ್ ಹಂತದ ಪಂದ್ಯಗಳಿಗೆ ಶೇ. 25ರಿಂದ 50 ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಮಾಡಿಕೊಡಲಾಗಿತ್ತು.
ಐಪಿಎಲ್ 2022 ಟೂರ್ನಿಯ ನಾಕ್‌ಔಟ್ ಹಂತದ ಪಂದ್ಯಗಳನ್ನು ಕೋಲ್ಕತಾ ಮತ್ತು ಅಹ್ಮದಾಬಾದ್‌ನಲ್ಲಿ ಆಯೋಜಿಸಲಾಗುತ್ತಿದೆ. ಈ ಪಂದ್ಯಗಳು ಶೇ. 100ರಷ್ಟು ಪ್ರೇಕ್ಷಕರನ್ನು ಹೊಂದಲಿವೆ. ಲೀಗ್ ಹಂತದ ಪಂದ್ಯಗಳ ಮೇ 22ಕ್ಕೆ ಅಂತ್ಯಗೊಳ್ಳಲಿದ್ದು, ನಂತರ ನಾಕ್‌ಔಟ್ ಹಂತದ ಪಂದ್ಯಗಳ ಆಯೋಜನೆ ಆಗಲಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಹಿತಿ ನೀಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಒಟ್ಟು ಹತ್ತು ತಂಡಗಳು ಟ್ರೋಫಿ ಸಲುವಾಗಿ ಕಾದಾಟ ನಡೆಸುತ್ತಿವೆ. ಲಖನೌ ಸೂಪರ್ ಜಯಂಟ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಲೀಗ್‌ಗೆ ಕಾಲಿಟ್ಟಿರುವ ಎರಡು ಹೊಸ ತಂಡಗಳು. 10 ತಂಡಗಳಿರುವ ಕಾರಣ ಲೀಗ್ ಹಂತದಲ್ಲೇ ಈ ಬಾರಿ ಒಟ್ಟು 70 ಪಂದ್ಯಗಳ ಆಯೋಜನೆ ಆಗಲಿದೆ.
ಲೀಗ್ ಹಂತದ 70 ಪಂದ್ಯಗಳ ಆಯೋಜನೆ ಸಲುವಾಗಿ ಮಹಾರಾಷ್ಟ್ರವನ್ನು ಆಯ್ಕೆ ಮಾಡಿಕೊಂಡಿದ್ದ ಬಿಸಿಸಿಐ, ಮುಂಬೈನ ವಾಂಖೆಡೆ, ಬ್ರಬೋರ್ನ್ ಮತ್ತು ಡಿ.ವೈ ಪಾಟಿಲ್ ಕ್ರೀಡಾಂಗಣಗಳಲ್ಲಿ ಒಟ್ಟು 45 ಪಂದ್ಯ ಮತ್ತು ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ 15 ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಿತ್ತು. ಈ ಸಲುವಾಗಿ ಬಯೋ ಬಬಲ್ ಕೂಡ ನಿರ್ಮಾಣ ಮಾಡಿತ್ತು. ಇದೀಗ ಪ್ಲೇ-ಆಫ್ಸ್ ಮತ್ತು ಫೈನಲ್ ಪಂದ್ಯಗಳನ್ನು ಕೂಡ ಸುರಕ್ಷಿತವಾಗಿ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ.
ಐಪಿಎಲ್ 2022 ಟೂರ್ನಿಯ ಲೀಗ್ ಹಂತದ ಪಂದ್ಯಗಳ ಬಗ್ಗೆ ಮಾತನಾಡುವುದಾದರೆ, 36 ಪಂದ್ಯಗಳ ಮುಕ್ತಾಯಕ್ಕೆ ಒಟ್ಟು 6 ಜಯದೊಂದಿಗೆ 12 ಅಂಕಗಳಿಸಿರುವ ಗುಜರಾತ್ ಟೈಟನ್ಸ್ ಅಂಕಪಟ್ಟಿಯ ಅಗ್ರಸ್ಥಾನದಲ್ಲಿದೆ. 7ರಲ್ಲಿ 5 ಪಂದ್ಯ ಗೆದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ 2ನೇ ಸ್ಥಾನದಲ್ಲಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ ಲೀಗ್ ಹಂತದಲ್ಲಿ ಸತತ 5ನೇ ಪಂದ್ಯ ಗೆಲ್ಲುವ ಮೂಲಕ ಅಂಕಪಟ್ಟಿಯ 2ನೇ ಸ್ಥಾನಕ್ಕೇರಿದೆ. ತನ್ನ ಮೊದಲ ಎರಡು ಪಂದ್ಯಗಳನ್ನು ಸೋತು ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದ್ದ ಸನ್‌ರೈಸರ್ಸ್ ಇದೀಗ ಸತತ 5 ಪಂದ್ಯ ಗೆದ್ದು ಅದ್ಭುತ ಕಮ್‌ಬ್ಯಾಕ್ ಮಾಡಿದೆ.
ಮಹಿಳಾ ಟಿ20 ಚಾಲೆಂಜ್ ಆಯೋಜನೆ ಮಹಿಳಾ ಐಪಿಎಲ್ ಆರಂಭಿಸಲು ಬಿಸಿಸಿಐ ಸಕಲ ಯೋಜನೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಕಳೆದ ಬಾರಿಯಂತೆ ಈ ಬಾರಿಯೂ 3 ತಂಡಗಳ ನಡುವಣ ಮಹಿಳಾ ಟಿ20 ಚಾಲೆಂಜ್ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಟ್ರೈಲ್‌ಬ್ಲೇಝರ್ಸ್, ಸೂಪರ್‌ನೋವಾಸ್ ಮತ್ತು ವೆಲಾಸಿಟಿ ತಂಡಗಳ ನಡುವಣ ಪಂದ್ಯ ಮೇ 24ರಿಂದ ಮೇ 28ರವರೆಗೆ ಜರುಗಲಿದೆ.