ಮುಂಬೈ : ಭಾರತೀಯ ಕ್ರಿಕೆಟ್ ಲೋಕ ಎಂದೂ ನೆನಪಿಟ್ಟುಕೊಳ್ಳುವ ಸ್ಟಾರ್ ಬ್ಯಾಟರ್ಸ್ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಇನ್ನೂ ಕೆಲ ವರ್ಷಗಳವರೆಗೆ ಟಾಪ್-10 ಕ್ರಿಕೆಟಿಗರ ಪಟ್ಟಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಹೆಸರೆಂದರೇ ಅದು ರೋ-ಕೊ ಜೋಡಿ. ಅವರೀಗ ತಮ್ಮ ಕ್ರೆಕೆಟ್ ಬದುಕಿಗೆ ತೆರೆ ಎಳೆಯುವ ಸನಿಹಕ್ಕೆ ಬಂದಿದ್ದಾರೆ.
2027ರ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ರೋ-ಕೊ ಜೋಡಿ ಕಳೆದ ಆಸ್ಟ್ರೇಲಿಯಾ ಏಕದಿನ ಸರಣಿ ಬಳಿಕ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತು. ಇದೀಗ ಇಬ್ಬರ ಮುಂದಿನ ಭವಿಷ್ಯದ ಕುರಿತು ಚರ್ಚಿಸಲು ಬಿಸಿಸಿಐ ಹಾಗೂ ಟೀಂ ಇಂಡಿಯಾ ಆಯ್ಕೆ ಸಮಿತಿ ಮಹತ್ವದ ಸಭೆ ನಡೆಸಲು ನಿರ್ಧರಿಸಿದೆ ಎಂದು ವರದಿಯಾಗಿದೆ.
ಮುಂದಿನ ವಾರ ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3ನೇ ಏಕದಿನ ಪಂದ್ಯದ ಬಳಿಕ ಬಿಸಿಸಿಐ ಉನ್ನತ ಅಧಿಕಾರಿಗಳು, ಮುಖ್ಯಕೋಚ್ ಗೌತಮ್ ಗಂಭಿರ್ ಹಾಗೂ ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ ನಡುವೆ ಅಹಮದಾಬಾದ್‌ನಲ್ಲಿ ಸಭೆ ನಡೆಯಲಿದೆ ಎಂದು ಹೇಳಲಾಗ್ತಿದೆ.
ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿರುವ ಈ ತಾರಾ ಜೋಡಿ 2027ರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶಗಳ ಕುರಿತು ಈವರೆಗೆ ಬಿಸಿಸಿಐ ಯಾವುದೇ ನಿರ್ಣಯ ಕೈಗೊಂಡಿಲ್ಲ. ಮಾಹಿತಿ ಪ್ರಕಾರ, ರೋಹಿತ್ ಶರ್ಮಾಗೆ ಫಿಟ್‌ನೆಸ್ ಕಾಯ್ದುಕೊಳ್ಳುವ ಜೊತೆಗೆ ಸ್ಥಿರ ಪ್ರದರ್ಶನದ ಮೇಲೆ ಗಮನ ಹರಿಸುವಂತೆ ಎಚ್ಚರಿಸಿದೆ. ಅಲ್ಲದೇ ವಿರಾಟ್ ಕೊಹ್ಲಿಗೂ ಇದೇ ಸಲಹೆ ನೀಡಿದ್ದು, ವದಂತಿಗಳಿಗೆ ಕಿವಿಗೊಡದೇ ಆಟದತ್ತ ಮಾತ್ರ ಗಮನಹರಿಸುವಂತೆ ಕಿವಿಮಾತು ಹೇಳಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಹೊರತುಪಡಿಸಿ, ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಈ ಜೋಡಿ ಮುಂದಿನ ತಿಂಗಳು ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳುವಂತೆ ಬಿಸಿಸಿಐ ಸೂಚಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಏಕದಿನ ಸರಣಿಯ ನಂತರ, ಭಾರತ ಜನವರಿಯಲ್ಲಿ ಮತ್ತೊಂದು ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಈ ಎಲ್ಲದರಲ್ಲೂ ಈ ಜೋಡಿ ನೀಡುವ ಸ್ಥಿರ ಪ್ರದರ್ಶನದ ಮೇಲೆ 2027ರ ವಿಶ್ವಕಪ್‌ಗೆ ಆಯ್ಕೆ ಮಾಡಬೇಕಾ ಬೇಡವಾ? ಅನ್ನೋ ಬಗ್ಗೆ ಬಿಸಿಸಿಐ ನಿರ್ಧಾರ ಕೈಗೊಳ್ಳಲಿದೆ.















