ಮನೆ ಅಪರಾಧ ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಹಿಂದು ಯುವತಿ ಜೊತೆ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ಹಲ್ಲೆ

ಮಂಗಳೂರಿನಲ್ಲಿ ಮತೀಯ ಗೂಂಡಾಗಿರಿ: ಹಿಂದು ಯುವತಿ ಜೊತೆ ಪ್ರಯಾಣಿಸುತ್ತಿದ್ದ ಯುವಕನ ಮೇಲೆ ಹಲ್ಲೆ

0

ಮಂಗಳೂರು: ಹಿಂದೂ ಯುವತಿಯ ಜೊತೆಗೆ ಪ್ರಯಣಿಸುತ್ತಿದ್ದ ಮುಸ್ಲಿಂ ಯುವಕನಿಗೆ ಸಂಘಪರಿವಾರದ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಗರದ ನಂತೂರು ಜಂಕ್ಷನ್‌ ಬಳಿ ಗುರುವಾರ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಕಾರ್ಕಳ ತಾಲ್ಲೂಕಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಸೈಯದ್ ರಶೀಮ್ ಉಮರ್ (20) ಎಂದು ಗುರುತಿಸಲಾಗಿದೆ.

ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ರಶೀಮ್‌ ಅವರು ಯುವತಿಯೊಬ್ಬರ ಜೊತೆ ಪ್ರಯಾಣಿಸುತ್ತಿದ್ದರು.

ಬಸ್ ನಂತೂರು ಜಂಕ್ಷನ್‌ ತಲುಪಿದಾಗ ನಾಲ್ಕೈದು ಯುವಕರು ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದರು. ಬಸ್‌ನಿಂದ ಕೆಳಗೆ ಇಳಿಸಿ ದೊಣ್ಣೆ ಮತ್ತು ಬೆತ್ತದಿಂದ ಹಲ್ಲೆ ನಡೆಸಿದರು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದರು ಎಂದು ಸೈಯದ್ ರಶೀಮ್ ಉಮರ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆ ಕುರಿತ ಟ್ವೀಟ್‌ ಒಂದಕ್ಕೆ ಪ್ರತಿಕ್ರಿಯಿಸಿರುವ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌, ಈ ಘಟನೆಗೆ ಸಂಬಂಧಿಸಿ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.