ಬೆಳಗಾವಿ(Belagavi): ಗೋಕಾಕ ತಾಲ್ಲೂಕಿನ ಖನಗಾಂವದಲ್ಲಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಫ್ಲೆಕ್ಸ್ ಹರಿದ ಪರಿಣಾಮ ಶನಿವಾರ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಶುಕ್ರವಾರ ರಾತ್ರಿ ಘಟನೆ ನಡೆದಿದ್ದು, ಈ ಘಟನೆ ಖಂಡಿಸಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಅಲ್ಲದೇ ಮೆರವಣಿಗೆ ನಡೆಸಿ, ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಖನಗಾಂವದ ರಾಯಣ್ಣ ವೃತ್ತದಲ್ಲಿ ಈ ಫ್ಲೆಕ್ಸ್ ಅಳವಡಿಸಲಾಗಿತ್ತು. ಕಿಡಿಗೇಡಿಗಳು ಇದನ್ನು ಹರಿದುಹಾಕಿದ್ದು, ಆತಂಕಕ್ಕೆ ಕಾರಣವಾಗಿತ್ತು.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಗೋಕಾಕ ಗ್ರಾಮೀಣ ಪಿಎಸ್ಐ ಎನ್.ಆರ್.ಖಿಲಾರಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಫ್ಲೆಕ್ಸ್ ಹರಿದುಹಾಕಿದ್ದಾನೆ ಎಂಬ ಸಂಶಯವಿದೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡದೆ ಶಾಂತಿ ಕಾಪಾಡಲು ಸಹಕರಿಸಬೇಕು ಎಂದರು.