ಮನೆ ಕಾನೂನು ಬಿಲ್ಕಿಸ್ ಬಾನೊ ಪ್ರಕರಣ:  ಅಪರಾಧಿಗಳ ಶಿಕ್ಷೆ ತಗ್ಗಿಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ: ನ್ಯಾ. ಯು...

ಬಿಲ್ಕಿಸ್ ಬಾನೊ ಪ್ರಕರಣ:  ಅಪರಾಧಿಗಳ ಶಿಕ್ಷೆ ತಗ್ಗಿಸುವ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ: ನ್ಯಾ. ಯು ಡಿ ಸಾಲ್ವಿ

0

ಗುಜರಾತ್‌ ಕೋಮುದಂಗೆಗಳ ವೇಳೆ ಬಿಲ್ಕಿಸ್‌ ಬಾನೋ ಅವರ ಕುಟುಂಬದ ಸದಸ್ಯರನ್ನು ಹತ್ಯೆಗೈದು ಆಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಅಪರಾಧಿಗಳಾಗಿದ್ದ 11 ಮಂದಿಗೆ ಶಿಕ್ಷೆಯನ್ನು ಕಡಿಮೆ ಮಾಡಿ ಬಿಡುಗಡೆಗೊಳಿಸಿರುವ ಗುಜರಾತ್‌ ಸರ್ಕಾರದ ನಿರ್ಧಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗಲಿದೆ ಎಂದು ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾ. ಯು ಡಿ ಸಾಲ್ವಿ ಅವರು ಹೇಳಿದ್ದಾರೆ.

ಸಾಲ್ವಿ ಅವರು ಪ್ರಕರಣದ ವಿಚಾರಣಾ ನ್ಯಾಯಾಧೀಶರಾಗಿ ಹನ್ನೊಂದು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದರು. ಗುಜರಾತ್‌ ಸರ್ಕಾರದ ನಿರ್ಧಾರದ ಬಗ್ಗೆ ‘ಬಾರ್‌ ಅಂಡ್‌ ಬೆಂಚ್’ಗೆ ಪ್ರತಿಕ್ರಿಯಿಸಿದ ಅವರು ಇದು ಮುಂದಿನ ದಿನಗಳಲ್ಲಿ ವ್ಯಾಪಕ ಪರಿಣಾಮವನ್ನು ಬೀರಲಿದೆ ಎಂದರು.

ಗುಜರಾತ್‌ ಸರ್ಕಾರದ ನಡೆಯನ್ನು ಸ್ಪಷ್ಟ ಶಬ್ದಗಳಲ್ಲಿ ಖಂಡಿಸಿದ ಅವರು, “ಈ ನಿರ್ಧಾರದ ಮೂಲಕ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ. ಇದು ತಪ್ಪು ಎಂದು ನಾನು ಹೇಳುತ್ತೇನೆ. ಇದನ್ನು ಮುಂದಿರಿಸಿಕೊಂಡು ಇತರೆ ಸಾಮೂಹಿಕ ಅತ್ಯಾಚಾರ ಪ್ರಕರಣಗಳ ಅಪರಾಧಿಗಳು ಸಹ ಇಂತಹದ್ದೇ ಪರಿಹಾರ ಕೋರಲಿದ್ದಾರೆ” ಎಂದು ತಮ್ಮ ಅಸಮ್ಮತಿ ಸೂಚಿಸಿದರು.

ಮುಂದುವರೆದು, ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿರುವ ಬೆನ್ನಿಗೆ ಅವರ ತವರು ರಾಜ್ಯದಲ್ಲಿಯೇ ಅಸಹಾಯಕ ಹೆಣ್ಣುಮಗಳೊಬ್ಬಳನ್ನು ಸಾಮೂಹಿಕ ಅತ್ಯಾಚಾರಗೈದವರನ್ನು ಸರ್ಕಾರವು ಬಿಡುಗಡೆ ಮಾಡಿರುವ ವೈರುಧ್ಯದ ಬಗ್ಗೆ ಅವರು ಗಮನಸೆಳೆದರು.

ಈ ಬಗ್ಗೆ ವಿವರಿಸುತ್ತಾ, “ಇದು ನಿಜಕ್ಕೂ ವಿಡಂಬನೆ. ನಮ್ಮ ಪ್ರಧಾನ ಮಂತ್ರಿಯವರು ಸ್ತ್ರೀ ಸಬಲೀಕರಣದ ಬಗ್ಗೆ ಮಾತನಾಡುತ್ತಿರುವ ಹೊತ್ತಿಗೇ, ಅವರದೇ ತವರು ರಾಜ್ಯವು ಅಸಹಾಯಕ ಹೆಣ್ಣುಮಗಳೊಬ್ಬಳನ್ನು ಸಾಮೂಹಿಕವಾಗಿ ಅತ್ಯಾಚಾರಗೈದವರನ್ನು ಬಿಡುಗಡೆ ಮಾಡಿದೆ” ಎಂದು ವಿಷಾದಿಸಿದರು.

ಅಪರಾಧಿಗಳಿಗೆ ಶಿಕ್ಷೆ ನೀಡುವ ಹಿಂದಿನ ತತ್ವವನ್ನು ವಿವರಿಸುತ್ತಾ ನ್ಯಾ. ಸಾಲ್ವಿ ಅವರು, “ತಾವು ತಪ್ಪು ಮಾಡಿದ್ದೇವೆ ಎನ್ನುವ ಅರಿವು ಅಪರಾಧಿಗೆ ಆಗುವ ಸಲುವಾಗಿ ಶಿಕ್ಷೆ ವಿಧಿಸಲಾಗುತ್ತದೆ. ಆರೋಪಿಗಳು ತಮ್ಮ ತಪ್ಪಿನ ಬಗ್ಗೆ ಪರಿತಾಪ ಮತ್ತು ಪ್ರಾಯಶ್ಚಿತ್ತ ಅನುಭವಿಸಬೇಕು. ಪ್ರಸಕ್ತ ಪ್ರಕರಣದಲ್ಲಿ ಈ ಅಪರಾಧಿಗಳು ಅಂತಹ ಯಾವುದೇ ಪರಿತಾಪ, ಪ್ರಾಯಶ್ಚಿತ್ತವನ್ನು ಅಭಿವ್ಯಕ್ತಿಸಿದ್ದಾರೆಯೇ ಎನ್ನುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ತಾವು ಮಾಡಿದ ಕೃತ್ಯದ ಬಗ್ಗೆ ಅವರು ವಿಷಾದವನ್ನಾಗಲಿ ಅಥವಾ ತಮ್ಮ ತಪ್ಪಿನ ಅರಿವಾಗಿದೆ ಎಂದಾಗಲಿ ಹೇಳಿದ್ದಾರೆಯೇ?” ಎಂದು ಪ್ರಶ್ನಿಸಿದರು.

ಅಲ್ಲದೆ, ಇಂತಹ ಹೇಯ ಕೃತ್ಯಗೈದವರು ಬಿಡುಗಡೆಯಾದಾಗ ಅವರಿಗೆ “ಭವ್ಯ ಸ್ವಾಗತ” ನೀಡುವ ಪರಿಪಾಠದ ಬಗ್ಗೆಯೂ ನ್ಯಾ. ಸಾಲ್ವಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ಇದು ನಿಜಕ್ಕೂ ಕೆಟ್ಟ ಅಭಿರುಚಿ. ಜನ ಅವರನ್ನು ಏಕೆ ಹೀಗೆ ಸ್ವಾಗತಿಸುತ್ತಿದ್ದಾರೆ ಎನ್ನುವುದು ನನಗೆ ತಿಳಿಯದಾಗಿದೆ. ಇಂತಹದ್ದನ್ನ ಪ್ರೋತ್ಸಾಹಿಸುತ್ತಿರುವ ಮಂದಿ ಸ್ಪಷ್ಟ ರಾಜಕೀಯ ಉದ್ದೇಶ ಹಾಗೂ ಕಾರ್ಯಸೂಚಿಯನ್ನು ಹೊಂದಿದ್ದಾರೆ ಎಂದು ನನಗೆ ಅನಿಸುತ್ತದೆ. ಇಂದು ಎಂದಿಗೂ ಆಗಬಾರದು” ಎಂದು ಬೇಸರಿಸಿದರು.

ನ್ಯಾ. ಸಾಲ್ವಿ ಅವರು ಬಿಲ್ಕಿಸ್‌ ಬಾನೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ವಿಚಾರಣಾ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ 2008ರಲ್ಲಿ ಹನ್ನೊಂದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದ್ದರು. ಏಳು ಮಂದಿಯನ್ನು ಅವರು ಆರೋಪ ಮುಕ್ತಗೊಳಿಸಿದ್ದರು. ಪ್ರಕರಣದಲ್ಲಿ ಹನ್ನೊಂದು ಮಂದಿಗೆ ಶಿಕ್ಷೆ ನೀಡಿರುವುದನ್ನು ಬಾಂಬೆ ಹೈಕೋರ್ಟ್‌ 2017ರಲ್ಲಿ ಎತ್ತಿ ಹಿಡಿದಿತ್ತು. ಅಲ್ಲದೆ, ನ್ಯಾ. ಸಾಲ್ವಿ ಅವರು ಬಿಡುಗಡೆ ಮಾಡಿದ್ದ ಏಳು ಮಂದಿಗೂ ಹೈಕೋರ್ಟ್‌ ಶಿಕ್ಷೆ ನೀಡಿತ್ತು.

ಹಿಂದಿನ ಲೇಖನಭಯೋತ್ಪಾದನಾ ಚಟುವಟಿಕೆ ನಡೆಸಲು ಉಗ್ರರಿಗೆ ಹಣ ಒದಗಿಸುತ್ತಿದ್ದ ವ್ಯಕ್ತಿಯ ಬಂಧನ
ಮುಂದಿನ ಲೇಖನಬೆಳಗಾವಿ: ಸಂಗೊಳ್ಳಿ ರಾಯಣ್ಣ ಫ್ಲೆಕ್ಸ್ ಹರಿದ ಕಿಡಿಗೇಡಿಗಳು: ಉದ್ವಿಗ್ವ ವಾತಾವರಣ