ಮನೆ ಕಾನೂನು ಬೆಳಗಾವಿ ವಿವಸ್ತ್ರ ಪ್ರಕರಣ: ವಿಚಾರಣಾಧೀನ ನ್ಯಾಯಾಲಯಕ್ಕೆ 1,100 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಸಿಐಡಿ

ಬೆಳಗಾವಿ ವಿವಸ್ತ್ರ ಪ್ರಕರಣ: ವಿಚಾರಣಾಧೀನ ನ್ಯಾಯಾಲಯಕ್ಕೆ 1,100 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ ಸಿಐಡಿ

0

ಬೆಳಗಾವಿ ಜಿಲ್ಲೆಯ ಹೊಸ ವಂಟಮುರಿ ಗ್ರಾಮದಲ್ಲಿ ಮಹಿಳೆಯ ಮೇಲೆ ದೌರ್ಜನ್ಯವೆಸಗಿ ವಿವಸ್ತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಸಿಐಡಿ ಪೊಲೀಸರು ಬುಧವಾರ ಸುಮಾರು 1,100 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಸಿಐಡಿ ಪೊಲೀಸ್‌ ವರಿಷ್ಠಾಧಿಕಾರಿ ಪೃಥ್ವಿಕ್‌ ಕುಮಾರ್‌ ಅವರು ಬೆಳಗಾವಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೋಹನ್‌ ಪ್ರಭು ಅವರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದರು.

ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಬೆಳಗಾವಿಯ ಕಾಕತಿ ಠಾಣೆಯಲ್ಲಿ 2023ರ ಡಿಸೆಂಬರ್‌ 11ರಂದು ಎಫ್‌ಐಆರ್‌ ದಾಖಲಾಗಿತ್ತು.

ಪ್ರಕರಣದಲ್ಲಿ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಬಾಲಾಪರಾಧಿಯಾಗಿದ್ದಾನೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ ಗಳಾದ 109, 114, 117, 143, 147, 148, 307, 323, 324, 326, 341, 342, 353, 354, 354(b), 355, 392, 427, 452, 504, 506 ಜೊತೆಗೆ 149, 37 ಮತ್ತು 34, ಆಸ್ತಿ ನಾಶ ಮತ್ತು ನಷ್ಟ ತಡೆ ಕಾಯಿದೆ 2(ಎ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಬಾಲಾಪರಾಧಿಯ ವಿರುದ್ಧ ಇಂದು ಬಾಲನ್ಯಾಯ ಮಂಡಳಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.

ಈ ಪ್ರಕರಣದ ಮಾಧ್ಯಮ ವರದಿ ಆಧಾರಿಸಿ ಕರ್ನಾಟಕ ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಘಟನೆಯ ಬಗ್ಗೆ ತೀವ್ರ ವಿಷಾದ ದಾಖಲಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.