ಬೇಲೂರು (ಹಾಸನ ಜಿಲ್ಲೆ): ಕಾಡಾನೆಯೊಂದು ನ್ಯಾಯಬೆಲೆ ಅಂಗಡಿಯ ಬಾಗಿಲು ಮುರಿದು ಅಕ್ಕಿ ತಿಂದು ಹೋಗಿರುವ ಘಟನೆ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದಲ್ಲಿ ನಡೆದಿದೆ.
ನ್ಯಾಯಬೆಲೆ ಅಂಗಡಿಗೆ ಬುಧವಾರ ಬೆಳಗಿನ ಜಾವ 4.50ಕ್ಕೆ ಬಂದ ಕಾಡಾನೆ, ಅಂಗಡಿಯ ರೋಲಿಂಗ್ ಶಟರ್ ಮುರಿದು ಒಳನುಗ್ಗಿ ಗ್ರಾಹಕರಿಗೆ ಹಂಚಲು ದಾಸ್ತಾನು ಮಾಡಿದ್ದ ಸುಮಾರು 50 ಕೆಜಿ ಅಕ್ಕಿಯನ್ನು ತಿಂದು ಹೋಗಿದೆ.
ಅಂಗಡಿ ಮೇಲ್ವಿಚಾರಕ ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ತಕ್ಷಣ ಆಹಾರ ಇಲಾಖೆಗೆ ದೂರು ನೀಡಿದ್ದಾರೆ.
ಈ ಹಿಂದೆಯೂ ಇಂಥದೇ ಘಟನೆ ನಡೆದಿದ್ದು, ಇದೇ ಆನೆ ಪದೇ ಪದೇ ಅಕ್ಕಿ ತಿನ್ನಲು ಬರುತ್ತಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕಪಡಿಸಿದ್ದಾರೆ. ಅಲ್ಲದೇ, ಗ್ರಾಮಕ್ಕೆ ಆನೆ ಬಂದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಆಹಾರ ಇಲಾಖೆ ಶಿರಸ್ತೇದಾರ್ ಮಂಜುನಾಥ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.
ನಂತರ ಮಾತನಾಡಿ, ಕಾಡಾನೆ ರಾತ್ರಿ ವೇಳೆ ಅಂಗಡಿ ಬಾಗಿಲು ಮುರಿದು ಅಕ್ಕಿ ತಿಂದು ಹೋಗಿರುವ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಲಾಗಿದ್ದು, ಖೋತಾ ಆಗಿರುವ ಜಾಗಕ್ಕೆ ಹೆಚ್ಚುವರಿಯಾಗಿ ಐವತ್ತು ಕೆಜಿ ಅಕ್ಕಿ ನೀಡುವಂತೆ ಮನವಿ ಮಾಡಲಾಗಿದೆ. ಆನೆಯು ಬಾಗಿಲು ಮುರಿಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಬಾಗಿಲು ಮುರಿಯಲು ಪ್ರಯತ್ನಿಸಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.














