ಬೇಲೂರು (ಹಾಸನ ಜಿಲ್ಲೆ): ಚನ್ನಕೇಶವ ಸ್ವಾಮಿ ರಥೋತ್ಸವದಲ್ಲಿ ರಥದ ಮುಂದೆ ಕುರಾನ್ ಪಠಣ (ದೇವರಿಗೆ ವಂದನೆ) ಮಾಡದೇ, ಸಂಪ್ರದಾಯದಂತೆ ಮೆಟ್ಟಿಲುಗಳ ಬಳಿ ನಿಂತು ವಂದನೆ ಸಲ್ಲಿಸಲು ಧಾರ್ಮಿಕ ದತ್ತಿ ಇಲಾಖೆ ಅವಕಾಶ ನೀಡಿದೆ.
ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ಈ ಕುರಿತು ಮಾಹಿತಿ ನೀಡಿ, ಕುರಾನ್ ಪಠಣ ಕುರಿತು ಉಂಟಾದ ಗೊಂದಲಗಳನ್ನು ಪರಿಶೀಲಿಸಲು ಧಾರ್ಮಿಕ ದತ್ತಿ ಇಲಾಖೆ ಕಚೇರಿಯ ಹಿರಿಯ ಆಗಮ ಪಂಡಿತ ವಿಜಯ್ ಕುಮಾರ್ ಮಾ. 30ರಂದು ದೇಗುಲಕ್ಕೆ ಬಂದಿದ್ದು, ಮ್ಯಾನ್ಯುವಲ್ ಪರಿಶೀಲಿಸಿ ನೀಡಿದ ವರದಿ ಅನ್ವಯ ಸೋಮವಾರ ಆದೇಶ ಬಂದಿದೆ ಎಂದರು.
ರಥೋತ್ಸವದ ಸಂದರ್ಭದಲ್ಲಿ ಖಾಜಿ ಸಾಹೇಬರು ಬಂದು, ದೇಗುಲದ ಮರ್ಯಾದೆಗಳನ್ನು ಸ್ವೀಕರಿಸಿ, ಸಂಪ್ರದಾಯ ಪದ್ಧತಿಗಳಲ್ಲಿ ಯಾವುದೇ ವ್ಯತ್ಯಾಸ ಆಗದಂತೆ, ದೇಗುಲದ ಕೈಪಿಡಿಯಂತೆ ದೇವರಿಗೆ ವಂದನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅವರನ್ನು ಆಹ್ವಾನಿಸಿದ್ದೇವೆ ಎಂದರು.