ಬೆಂಗಳೂರು: ಇಂದಿನಿಂದ ಎರಡು ದಿನಗಳ ಕಾಲ ನಡೆಯುವ ನಮ್ಮ ಕಂಬಳದ ಬೆಂಗಳೂರು ಕಂಬಳ ಕೆರೆಗೆ ಯುವರತ್ನ ಡಾ. ಪುನಿತ್ ರಾಜಕುಮಾರ್ ಪತ್ನಿ ಅಶ್ವಿನಿ ಪುನಿತ್ ರಾಜಕುಮಾರ್ ಅವರು ಶನಿವಾರ (ನ.25) ದೀಪ ಬೆಳಗುವ ಮೂಲಕ ಕೋಣಗಳ ಓಟಕ್ಕೆ ಚಾಲನೆ ನೀಡಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಂಸದ ಸದಾನಂದ ಗೌಡ, ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಆರ್.ವಿಶ್ವನಾಥ್ ಹಾಗೂ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಇದಕ್ಕೂ ಮೊದಲು ರಾಜ ಮಹರಾಜ ಹೆಸರಿನ ಕಂಬಳ ಕರೆಗೆ ಅರ್ಚಕರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ದೈವ, ದೇವರ ಪ್ರಸಾದ ಕಂಬಳ ಕರೆಯ ನೀರಿಗೆ ಅರ್ಪಣೆ ಮಾಡಿ, ಯಾವುದೇ ಅಡ್ಡಿ-ಆತಂಕ ಎದುರಾಗದಂತೆ ಪ್ರಾರ್ಥನೆ ಸಲ್ಲಿಸಿ, ದೀಪ ಬೆಳಗಿಸಿ ಕಾಯಿ ಒಡೆದರು.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಕಂಬಳ ಪಂದ್ಯಾವಳಿಯನ್ನು ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ. ಅಲ್ಲದೆ ಸಂಚಾರಿ ಪೊಲೀಸರು ಸಾರ್ವಜನಿಕರು ಕಟ್ಟುನಿಟ್ಟಾಗಿ ಟ್ರಾಫಿಕ್ ನಿಯಮ ಪಾಲಿಸುವಂತೆ ನೋಡಿಕೊಳ್ಳುತ್ತಿದ್ದಾರೆ. ಇನ್ನು ಕಂಬಳ ವೀಕ್ಷಣೆಗೆ ಬರುವ ಜನರು ಗೇಟ್ ನಂಬರ್ 1, 2, 3 ಹಾಗೂ 4ರ ಮೂಲಕ ಪ್ರವೇಶಿಸಲು ಅವಕಾಶ ನೀಡಲಾಗಿದೆ.
ಕಂಬಳ ವೀಕ್ಷಿಸಲು ಬರುವ ವಿವಿಐಪಿಗಳಿಗೆ ಪ್ರತ್ಯೇಕ ಎಂಟ್ರಿ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳು ಫನ್ ವರ್ಲ್ಡ್ ಕಡೆಯಿಂದ ಪ್ರವೇಶಿಸಬೇಕು. ಯಾವುದೇ ಟಿಕೆಟ್ ಇಲ್ಲದೆ ಉಚಿತವಾಗಿ ಪ್ರವೇಶದ ವ್ಯವಸ್ಥೆ ಮಾಡಲಾಗಿದೆ. ಸಂಜೆ 6:30 ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳ ಮೈದಾನಕ್ಕೆ ಆಗಮಿಸಲಿದ್ದಾರೆ.
ಬೆಂಗಳೂರು ಕಂಬಳದ ವಿಶೇಷತೆ
6 ರಿಂದ 7 ಸಾವಿರ ಜನರು ಗ್ಯಾಲರಿಯಲ್ಲಿ ಕುಳಿತುಕೊಂಡು ಕಂಬಳ ನೋಡಬಹುದು. ಕಂಬಳದ ಮುಖ್ಯ ವೇದಿಕೆಗೆ ಪುನಿತ್ ರಾಜ್ ಕುಮಾರ್ ಹೆಸರು ಇಡಲಾಗಿದೆ. ಕಂಬಳದ ಟ್ರಾಕ್ (ಕರೆ)ಗೆ ರಾಜ ಮಹಾರಾಜ ಎಂದು ಹೆಸರು ಇಡಲಾಗಿದೆ.
ಸಾಂಸ್ಕೃತಿಕ ವೇದಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಲಾಗಿದೆ. ಕಂಬಳದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮದ ವೈಭವ ಇರಲಿದೆ. ಕರಾವಳಿಯ ಸಾಂಪ್ರದಾಯಿಕ ಹುಲಿ ಕುಣಿತ ಕೂಡ ಆಯೋಜಿಸಲಾಗಿದೆ.
ಸಾಮಾನ್ಯವಾಗಿ ಕಂಬಳ ಕೋಣಗಳು ಓಡುವ ಟ್ರ್ಯಾಕ್ 147 ಮೀಟರ್ ಉದ್ದ ಇರುತ್ತದೆ, ಆದರೆ ಬೆಂಗಳೂರು ಕಂಬಳದ ಟ್ರ್ಯಾಕ್ 155 ಮೀಟರ್ ಉದ್ದವಿದೆ. ಇದು ಕಂಬಳದ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ. 228 ಜೋಡಿ ಕೋಣಗಳ ರಿಜಿಸ್ಟ್ರೇಷನ್ ಆಗಿದ್ದು, 200 ಜೋಡಿ ಫೈನಲ್ ಆಗಿವೆ. ಕಂಬಳದ ವೇಳೆ ಪ್ರಾಣಿ ರಕ್ಷಣಾ ಕಾಯ್ದೆಯನ್ನು ಅನುಸರಿಸಲಾಗುತ್ತದೆ.
ಗೆದ್ದ ಕೋಣಗಳಿಗೆ ಬಹುಮಾನ
ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು
ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು
ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.














